Chikkamagaluru: ಕಾಫಿ ಬೆಳೆಗಾರರಿಗೆ ಅಪಾರ ನಷ್ಟ
ಚಿಕ್ಕಮಗಳೂರು: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ಇದ್ದರೂ ಕೆಲವು ದೊಡ್ಡ ದೊಡ್ಡ ರಫ್ತು ಕಂಪನಿಗಳು, ವ್ಯಾಪಾರಿಗಳು ಹಾಗೂ ಕ್ಯೂರರ್‍ಸ್‌ಗಳ ಪಿತೂರಿಯಿಂದಾಗಿ ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಗದೆ ನಷ್ಟ ಅನುಭವಿಸುವಂತಾಗಿದೆ ಎಂದು ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಆರೋಪಿಸಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಾಲಿ ಅರೆಬಿಕಾ ಕಾಫಿಗೆ 193 ಸೆಂಟ್ಸ್‌ನಷ್ಟು ಬೆಲೆ ಇದೆ. ಇದರ ಪ್ರಕಾರ ಪ್ರತಿ 50 ಕೆಜಿ ಕಾಫಿಗೆ 16000 ಕ್ಕೂ ಹೆಚ್ಚು ಬೆಲೆ ಸಿಗಬೇಕು. ಆದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ 14500 ರಿಂದ ಮೇಲಕ್ಕೇರುತ್ತಲೇ ಇಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿದರೆ, ಸ್ಥಳೀಯ ವ್ಯಾಪಾರಿಗಳು ಇಸ್ರೇಲ್, ಉಕ್ರೇನ್ ಯುದ್ಧದ ಕಾರಣ ನೀಡುವ ಜೊತೆಗೆ ಇತ್ತೀಚಗೆ ಹಡಗಿನಲ್ಲಿ ಕಾಫಿ ಸಾಗಿಸುವಾಗ ಉಗ್ರಗಾಮಿಗಳು ದಾಳಿ ಮಾಡಿ ಕಂಟೇನರ್‌ಗಳನ್ನು ಹೈಜಾಕ್ ಮಾಡುತ್ತಾರೆ. ಈ ಕಾರಣಕ್ಕೆ ಖರೀದಿದಾರರು ಮುಂದೆ ಬರುತ್ತಿಲ್ಲ ಎನ್ನುವ ಸಬೂಬುಗಳನ್ನು ಹೇಳುತ್ತ ಪ್ರತಿ ಚೀಲ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಿಂತ 1500 ರಿಂದ 2000 ವರೆಗೆ ಕಡಿಮೆಗೆ ಖರೀದಿಸುತ್ತಿದ್ದಾರೆ. ಆದರೆ ಕಾಫಿಗೆ ಬೇಡಿಕೆ ಮಾತ್ರ ಹೆಚ್ಚುತ್ತಲೇ ಇರುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಇದೆಲ್ಲವನ್ನೂ ಅವಲೋಕಿಸಿದಾಗ ಇಲ್ಲಿ ದೊಡ್ಡ ರಫ್ತುದಾರರು, ಕ್ಯೂರರ್‍ಸ್‌ಗಳು ಹಾಗೂ ವ್ಯಾಪಾರಿಗಳ ಕೈವಾಡ ಇದರಲ್ಲಿರುವುದು ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸ್ಥಳೀಯ ಮಾರುಕಟ್ಟೆಯಲ್ಲಿರುವ ಬೆರಳೆಣಿಕೆಯ ಬೆಲೆ ನಿಗಧಿಪಡಿಸುವ ವ್ಯಕ್ತಿಗಳು, ಕ್ಯೂರರ್‍ಸ್ ಮತ್ತು ಬೆಳೆಗಾರರ ಸಂಘಟನೆಗಳ ಪ್ರತಿನಿಧಿಗಳ ಸಭೆ ಕರೆದು ಸಮಸ್ಯೆ ಬಗ್ಗೆ ಮುಖಾ ಮುಖಿ ಚರ್ಚೆಗೆ ಅವಕಾಶ ಮಾಡಿಕೊಟ್ಟಲ್ಲಿ ನಾವೂ ಸಹ ಕಾಫಿ ಮಂಡಳಿ ಅಧ್ಯಕ್ಷರನ್ನು ಸಭೆಗೆ ಬರುವಂತೆ ಮನವಿ ಮಾಡಲಿದ್ದೇವೆ ಎಂದಿದ್ದಾರೆ.
ಈ ಹಿಂದೆ ಎಬಿಸಿ ಕಂಪನಿಯ ಮಾಲೀಕರಾದ ದಿ. ಸಿದ್ಧಾರ್ಥ ಹೆಗಡೆ ಅವರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ದರವನ್ನೇ ಸ್ಥಳೀಯವಾಗಿ ನಿಗಧಿಪಡಿಸಿ ನ್ಯಾಯಯುತ ಬೆಲೆಯಲ್ಲೇ ಕಾಫಿ ಖರೀದಿ ಮಾಡಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಅವರ ಕಂಪನಿಯ ಬೆಲೆಯನ್ನೇ ಆಧರಿಸಿ ಉಳಿದ ಖರೀದಿದಾರರು 100 ರಿಂದ 200 ರೂ.ಗಳಷ್ಟು ಹೆಚ್ಚಿನ ಬೆಲೆಗೆ ಕಾಫಿ ಖರೀದಿಸುತ್ತಿದ್ದರು. ಇದರಿಂದಲೂ ಬೆಳೆಗಾರರಿಗೆ ಅನುಕೂಲವಾಗುತ್ತಿತ್ತು. ಆದರೆ ಸಿದ್ಧಾರ್ಥ ಅವರ ಅಗಲಿಕೆ ನಂತರ ಕಾಫಿ ಬೆಲೆಗೆ ನಿಖರವಾದ ಬೆಲೆಯೇ ಸಿಗದಂತಾಗಿದೆ ಎಂದಿದ್ದಾರೆ.
ಬೆಳೆಗಾರರಿಗೆ ಅರ್ಥವಾಗದಿರುವ ರೀತಿ ಬೇರೆ ಬೇರೆ ಸಬೂಬುಗಳನ್ನು ಹೇಳಿ ಕಡಿಮೆ ಬೆಲೆಯಲ್ಲಿ ಕಾಫಿ ಖರೀದಿಸುತ್ತ ಅನ್ಯಾಯ ಮಾಡುತ್ತಿರುತ್ತಾರೆ. ಈ ಬಗ್ಗೆ ಜಿಲ್ಲಾಡಳಿತ ಮಧ್ಯಪ್ರವೇಶಿಸದಿದ್ದರೆ ಮಾರುಕಟ್ಟೆ ಮೇಲೆ ನಿಯಂತ್ರಣವಿಲ್ಲದೆ ಬೆಳೆಗಾರರಿಗೆ ನಿರಂತರ ನಷ್ಟ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಗಳ ಬಗ್ಗೆ ಬೆಳೆಗಾರರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಉತ್ತಮ್‌ಗೌಡ ಹುಲಿಕೆರೆ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸಮಾಲೋಚಿಸಲಾಗಿದೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.