Chikkamagaluru: ಲಕ್ಕವಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ
ಚಿಕ್ಕಮಗಳೂರು: ಸಂವಿಧಾನ ಜಾಗೃತಿ ಜಾಥಾವು ಫೆ.10 ರಂದು ತರೀಕೆರೆ ತಾಲ್ಲೂಕಿನಲ್ಲಿ ಸಂಚರಿಸುತ್ತಿದ್ದು, ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ, ಕೆಂಚಿಕೊಪ್ಪ, ಬರ್ಗೇನಹಳ್ಳಿ, ಹಾಗೂ ಹಲಸೂರು ತರೀಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿತು.
ಪ್ರಥಮವಾಗಿ ಲಕ್ಕವಳ್ಳಿ ಗ್ರಾಮ ಪಂಚಾಯತಿಗೆ ಆಗಮಿಸಿದ ಜಾಗೃತಿ ರಥ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ದಲಿತ ಮುಖಂಡರು, ಶಿಕ್ಷಕರು, ಶಾಲಾ ಮಕ್ಕಳು, ಅಂಗನವಾಡಿ ಸಿಬ್ಬಂದಿಗಳು, ಸ್ವಸಹಾಯ ಸಂಘಗಳು, ಸ್ತೀ ಶಕ್ತಿ ಸಂಘದ ಸದಸ್ಯರುಗಳು ಮತ್ತು ಸಾರ್ವಜನಿಕರು ಸಂಭ್ರಮದಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಪುಷ್ಪಾರ್ಚನೆ ಮಾಡಿದರು.
ಶಾಲಾ ಮಕ್ಕಳು, ಛದ್ಮವೇಷಧಾರಿಗಳು, ಗ್ರಾಮಸ್ಥರು, ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳೊಂದಿಗೆ, ಬೈಕ್ ರ್‍ಯಾಲಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವೀರಗಾಸೆ ನೃತ್ಯ ಆಕರ್ಷಕವಾಗಿತ್ತು. ನಂತರ ಪಟ್ಟಣ ಪಂಚಾಯತ್ ಸದಸ್ಯರು ಸಂವಿಧಾನ ಪೀಠಿಕೆ ಭೋದಿಸಲಾಯಿತು. ಕೆಂಚಿಕೊಪ್ಪ ಶಾಲಾ ಮಕ್ಕಳು ದೇಶಭಕ್ತಿಗೀತೆ ಹಾಗೂ ಅಂಬೇಡ್ಕರ್ ಗೀತೆಗಳನ್ನು ಹಾಡಿದರು. ಹಲಸೂರು ಗ್ರಾಮ ಪಂಚಾಯತ್ ಶಾಲಾ ಮಕ್ಕಳಿಂದ ಭಕ್ತಿಗೀತೆ ಮತ್ತು ಅಭಿನಯ ಗೀತೆ, ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಕಿರುನಾಟಕ ಪ್ರದರ್ಶಿಸಿದರು. ಗ್ರಾಮದ ಮುಖಂಡರು ಸಂವಿಧಾನ ಕುರಿತು ಭಾಷಣ ಮಾಡಿದರು.



