
Mangalore: ಫೆ.10: 20ನೇ ವಾರ್ಷಿಕ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ
ಮಂಗಳೂರು: ಫೆ.10 ರಂದು 20ನೇ ವರ್ಷದ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ ಉತ್ಸವವು ಪಿ.ವಿ.ಎಸ್. ಮಂದಿರದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ ಎಂದು ಇಸ್ಕಾನ್‌ನ ಅಧ್ಯಕ್ಷ ಗುಣಾಕರ ರಾಮ ದಾಸ ಹೇಳಿದರು.
ಅವರು ಫೆ.7 ರಂದು ನಗರದ ಇಸ್ಕಾನ್ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಈ ರಥಯಾತ್ರೆಗೆ ರಥವು ಬೆಂಗಳೂರಿನಿಂದ ಬರಲಿದ್ದು, ನಗರದಲ್ಲಿ 5 ಕಿ.ಮೀ. ದೂರ ಸಾಗಲಿದೆ. ಸಂಜೆ 4.30ಕ್ಕೆ ರಥವು ಪಿವಿಎಸ್ ಮಂದಿರದಿಂದ, ಶಾರದ ವಿದ್ಯಾಲಯ ರಸ್ತೆ, ಟಿ.ವಿ. ರಮಣ ಪೈ ಸಭಾಂಗಣ ವೃತ್ತ, ಮಹಾಮಯಿ ದೇವಸ್ಥಾನ ರಸ್ತೆ, ವೆಂಕಟರಮಣ ದೇವಸ್ಥಾನ ವೃತ್ತ ರಥಬೀದಿ, ಬಿ.ಇ.ಎಂ. ಶಾಲೆ ರಸ್ತೆ, ಕುದ್ರೋಳಿ ದೇವಸ್ಥಾನ ರಸ್ತೆ, ಮಣ್ಣಗುಡ್ಡ ರಸ್ತೆ, ಬಲ್ಲಾಳ್ ಭಾಗ್ ರಸ್ತೆ, ಮಹಾತ್ಮ ಗಾಂಧಿ ರಸ್ತೆ ಮೂಲಕ ಇಸ್ಕಾನ್ ಪಿ.ವಿ.ಎಸ್ ರಸ್ತೆಯ ಮೂಲಕ ಸಂಜೆ 7.30ಕ್ಕೆ ಬಂದು ಸೇರಲಿದೆ ಎಂದರು.
ಈ ರಥಯಾತ್ರೆಗೆ 5000ಕ್ಕೂ ಕೆಚ್ಚು ಭಕ್ತರು ಸೇರಲಿದ್ದು, ಎಲ್ಲಾ ಭಕ್ತರಿಗೂ ರಥ ಎಳೆಯುವ ಅವಕಾಶ ಕಲ್ಪಿಸಲಾಗಿದೆ. ರಥಯಾತ್ರೆಯ ನಂತರ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಈ ಕಾರ್ಯಕ್ರಮಕ್ಕೆ ಶಾಸಕ ವೇದವ್ಯಾಸ ಕಾಮತ್, ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಅಧ್ಯಕ್ಷ ಡಾ. ಮೋಹನ್ ಆಳ್ವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್, ಮಂಗಳೂರು ನಗರಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ, ಅಭಿನವ್ ಬನ್ಸಲ್‌ನ ನಿದೇರ್ಶಕ ಎ.ಕೆ. ಬನ್ಸಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೊತೆ ಕಾರ್ಯದರ್ಶಿಗಳಾದ ರಾಧ ವಲ್ಲಭ ದಾಸ, ಸುಂದರ ಗೌರ ದಾಸ ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಉಪಸ್ಥಿತರಿದ್ದರು.