
Moodubidire: ಆದಿಶಕ್ತಿ ಮಹಾಕಾಳಿ ದೇವಸ್ಥಾನದ ಹಸಿರು ಹೊರೆಕಾಣಿಕೆ ಮೆರವಣಿಗೆ
Thursday, February 8, 2024
ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿರುವ ಪುರಾತನ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ಫೆ.11ರಂದು ನಡೆಯುವ ಸಾನಿಧ್ಯ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಸಿರು ಹೊರೆಕಾಣಿಕೆ ಮೆರವಣಿಗೆ ಗುರುವಾರ ನಡೆಯಿತು.
ವೆಂಕಟರಮಣ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಉಮೇಶ್ ಜಿ. ಪೈ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಚೆಂಡೆ, ನಾಸಿಕ್ ಬ್ಯಾಂಡ್ ಸದ್ದು, ಹೊರೆಕಾಣಿಕೆಯ ವಾಹನಗಳ ಸಾಲು, ಕಲಶ ಹಿಡಿದ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಬಂದರು.
ಪೇಟೆಯ ಮುಖ್ಯ ರಸ್ತೆಯಲ್ಲಿ ಹೊರಟ ಮೆರವಣಿಗೆಯಲ್ಲಿ ಮಾರಿ ದೇವಿಯ ಮೂರ್ತಿಯನ್ನು ತರಲಾಯಿತು. ತುಳುನಾಡಿನ ಧ್ವಜ, ಭಾರತಮಾತೆ ಮರವಣಿಗೆಯಲ್ಲಿ ಗಮನ ಸೆಳೆಯಿತು. ದೇವಸ್ಥಾನಕ್ಕೆ ಸಂಬಂಧಿಸಿದ ಪುತ್ತಿಗೆ ಗುತ್ತು, ಕೊಡ್ಯಡ್ಕ ಹೆಗ್ಡೆ ಮನೆತನದವರು, ಮೂಡುಬರ್ಕೆ ಮನೆತನದವರು, ಪುತ್ತಿಗೆ ಬೆರ್ಕೆ ಮನೆತನದವರು ಹಾಗೂ ಸಮಿತಿಯ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡರು. ರಾತ್ರಿ ಕ್ಷೇತ್ರದಲ್ಲಿ ಕೃಷ್ಣ ಶೆಟ್ಟಿ ಮತ್ತು ಕುಟುಂಬಸ್ಥರ ಸೇವಾರ್ಥ ಕಟೀಲು ಮೇಳದವರಿಂದ 'ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ನಡೆಯಿತು.