Udupi: ಭಾವನಾತ್ಮಕ ಪ್ರಚೋದನೆಯ ಹಿಂದುತ್ವ ಬೇಕಿಲ್ಲ: ಡಾ. ಮಂಜುನಾಥ ಭಂಡಾರಿ
ಉಡುಪಿ: ಭಾವನೆಗಳನ್ನು ಕೆರಳಿಸುವ, ಪ್ರಚೋದನೆಯ ಹಿಂದುತ್ವ ನಮಗೆ ಬೇಕಿಲ್ಲ. ಪರಸ್ಪರ ಪ್ರೀತಿಸುವ, ಗಾಂಧೀಜಿ ಹೇಳಿದ ಹಿಂದುತ್ವವನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಕೆಪಿಸಿಸಿ ಕಾರ‍್ಯಾಧ್ಯಕ್ಷ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ ಉಸ್ತುವಾರಿ ಡಾ. ಮಂಜುನಾಥ ಭಂಡಾರಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದುತ್ವ ಎಂದರೇನು ಎಂಬುದು ನಮಗೆ ಗೊತ್ತಿದೆ. ಅದನ್ನು ಬಿಜೆಪಿಯವರು ಕಲಿಸಿಕೊಡಬೇಕಾಗಿಲ್ಲ ಎಂದರು.
ಇಂದು ಅಯೋಧ್ಯೆಯಲ್ಲಿರುವುದು ಚುನಾವಣಾ ರಾಮನೇ ಹೊರತು ಅಯೋಧ್ಯೆಯ ರಾಮನಲ್ಲ, ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯೋಧ್ಯೆಯಲ್ಲಿ ತರಾತುರಿಯಿಂದ ರಾಮ ಮಂದಿರ ಉದ್ಘಾಟಿಸಲಾಗಿದೆ. ಪ್ರಧಾನಿ ಮೋದಿಯಿಂದ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಯಾವುದೇ ಮಠ, ಮಂದಿರಗಳ ಗರ್ಭಗುಡಿಗೆ ಅನ್ಯರಿಗೆ ಪ್ರವೇಶ ಇದೆಯೇ ಎಂದು ಡಾ| ಭಂಡಾರಿ ಪ್ರಶ್ನಿಸಿದರು.
ಕಳೆದ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಭರಸೆಯನ್ನು ಅಧಿಕಾರಕ್ಕೆ ಬಂದ ಕೇವಲ ಆರು ತಿಂಗಳಲ್ಲಿ ಜಾರಿಗೊಳಿಸಲಾಗಿದೆ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದುದ್ದವರು ಇದೀಗ ತಮ್ಮ ಹೆಸರಿನಲ್ಲಿ ಗ್ಯಾರಂಟಿ ನೀಡುತ್ತಿದ್ದಾರೆ. ದಿವಾಳಿಯಾಗಿರುವುದು ಅವರ ಮನಸ್ಸುಗಳೇ ಹೊರತು ರಾಜ್ಯವಲ್ಲ ಎಂದು ಕಟುವಾಗಿ ನುಡಿದರು.
ನಮ್ಮ ಗ್ಯಾರಂಟಿ ಭರವಸೆಯನ್ನು ನಂಬಿದ ರಾಜ್ಯದ ಜನತೆ ಕಾಂಗ್ರೆಸ್ಸಿಗೆ ಪೂರ್ಣ ಬಹುಮತದ ಸರಕಾರ ಕೊಟ್ಟಿದ್ದಾರೆ. ಇದು ನಮ್ಮ ಅತ್ಮವಿಶ್ವಾಸ ಹೆಚ್ಚಿಸಿದೆ. ರಾಜ್ಯದ 1.20 ಲಕ್ಷ ಕುಟುಂಬಗಳ ಸುಮಾರು 55 ಕೋಟಿ ಜನರಿಗೆ ರಾಜ್ಯದ ಗ್ಯಾರಂಟಿ ಯೋಜನೆಗಳು ತಲುಪಿದ್ದು, ಆ ಗ್ಯಾರಂಟಿ ಮೂಲಕವೇ ಲೋಕಸಭೆ ಚುನಾವಣೆಗೆ ಹೋಗುತ್ತಿದ್ದೇವೆ. ಕನಿಷ್ಟ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಪಕ್ಷ ಪ್ರಮುಖರಾದ ಎಂ.ಎ. ಗಫೂರ್, ಕಿಶನ್ ಹೆಗ್ಡೆ, ಪ್ರಸಾದ್‌ರಾಜ್ ಕಾಂಚನ್, ರಮೇಶ ಕಾಂಚನ್, ಪ್ರಖ್ಯಾತ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು ಮೊದಲಾದವರಿದ್ದರು.