Karkala: ನುಡಿದಂತೆ ನಡೆಯುವುದು ಕಾಂಗ್ರೆಸ್ ಸಂಸ್ಕೃತಿ: ಮಂಜುನಾಥ ಭಂಡಾರಿ
ಕಾರ್ಕಳ: ನುಡಿದಂತೆ ನಡೆಯುವುದು ಕಾಂಗ್ರೆಸ್ ಸಂಸ್ಕೃತಿ ಕಳೆದ ವಿಧಾನ ಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವೀ ಅನುಷ್ಠಾನ ಕಾಂಗ್ರೆಸ್ ಮೇಲಿದ್ದ ಜನರ ವಿಶ್ವಾಸವನ್ನು ಇಮ್ಮಡಿ ಗೊಳಿಸಿದೆ. ಇದು ಲೋಕಸಭಾ ಚುನಾವಣೆಯ ಗೆಲುವಿನ ಮುನ್ಸೂಚನೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.
ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾರ್ಕಳ ವಿಧಾನಸಭಾ ವ್ಯಾಪ್ತಿಯ ವಿವಿಧ ಬೂತ್‌ಗಳಿಗೆ ಬೇಟಿ ನೀಡಿದ ಬಳಿಕ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತಾಡುತ್ತಿದ್ದರು.
ಕಳೆದ ವಿಧಾನ ಸಬಾ ಚುನಾವಣೆಯಲ್ಲಿ 135 ಸೀಟುಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಒಟ್ಟು ಜನಶಕ್ತಿಯ ಸರಿ ಸುಮಾರು 44ಶೇ. ಮತಗಳಿಕೆಯೊಂದಿಗೆ ದಾಖಲೆ ಸೃಷ್ಠಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಲೋಕ ಸಭಾ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗಲಿದ್ದು ಕನಿಷ್ಟ 22 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ. ದೇಶದ ಸರ್ವಾಂಗೀಣ ಅಭಿವೃದ್ದಿಗೆ ಕಾಂಗ್ರೆಸ್ ಅನಿವಾರ್ಯ ಎಂಬ ಸತ್ಯ ಜನರ ಅರಿವಿಗೆ ಬಂದಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಉದಯಕುಮಾರ್ ಶೆಟ್ಟಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ (ಇಂಡಿಯ ಒಕ್ಕೂಟ) ಅಧಿಕಾರಕ್ಕೆ ಬಂದ ಕೂಡಲೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ಎಲ್ಲ ಭಾಗ್ಯಗಳ ಭರವಸೆಗಳನ್ನು ಮುಖ್ಯವಾಗಿ ನಾರೀ ನ್ಯಾಯದಡಿ 1ಲಕ್ಷ ರೂ, ಯುವ ನ್ಯಾಯದಡಿ ಯುವ ಉಧ್ಯಮಿಗಳಿಗೆ ಉತೇಜನ ನೀಡಲು ಪ್ರತೀ ಜಿಲ್ಲೆಗಳಿಗೆ 5 ಸಾವಿರ ಕೋಟಿ ಅನುದಾನ ನೀಡಲಾಗುವುದು. ಕಾಂಗ್ರೆಸ್ ಗೆಲುವಿನ ಸುಳಿವು ಸಿಕ್ಕ ಬಿಜೆಪಿ ಹತಾಶಗೊಂಡು ಹಳ್ಳಿಹಳ್ಳಿಗಳಿಗೆ ತನ್ನ ಕೇಂದ್ರ ನಾಯಕರನ್ನು ತರಿಸಿ ಸುಳ್ಳಿನ ಮೂಲಕ ಜನರ ದಿಕ್ಕು ತಪ್ಪುಸಲು ನೋಡುತ್ತಿದೆ ಎಂದರು.
ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಸದಾಶಿವ ದೇವಾಡಿಗ, ಚಂದ್ರ ಶೇಖರ ಬಾಯಿರಿ, ನ್ಯಾಯವಾದಿ ಶೇಖರ ಮಡಿವಾಳ, ಮಧುಕರ ಶೆಟ್ಟಿ ಉಪಸ್ಥಿತರಿದ್ದರು. ಪುರಸಭಾ ಸದಸ್ಯ ಸುಭದಾ ರಾವ್ ಸ್ವಾಗತಿಸಿ, ವಂದಿಸಿದರು.