Mangalore: ಎಸ್‌ಡಿಪಿಐನೊಂದಿಗೆ ಕಾಂಗ್ರೆಸ್ ಮೈತ್ರಿ: ಡಾ. ಭರತ್ ಶೆಟ್ಟಿ ವೈ.
ಮಂಗಳೂರು: ಪಿಎಫ್‌ಐನ ಪರ್ಯಾಯ ಪಾರ್ಟಿ, ಮಂಗಳೂರಿನಲ್ಲಿ ನಡೆದ ಕುಕ್ಕಾರ್ ಬಾಂಬ್ ಹಾಗೂ ಪ್ರವಿಣ್ ನೆಟ್ಟಾರು ಅವರ ಹತ್ಯೆಗೆ ಬೆಂಬಲ ನೀಡಿದ ಎಸ್‌ಡಿಪಿಐ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ. ಆರೋಪಿಸಿದರು.
ಅವರು ಎ.11 ರಂದು ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಸನಾತನ ಧರ್ಮವನ್ನು ವಿರೋಧಿಸುವ ಎಸ್‌ಡಿಪಿಐ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವಷ್ಟು ಕೀಳು ಮಟ್ಟಕ್ಕೆ ಕಾಂಗ್ರೆಸ್ ಇಳಿಯುತ್ತದೆ ಎಂದು ಭಾವಿಸಿರಲಿಲ್ಲ. ಎಸ್‌ಡಿಪಿಐ ಕಾಂಗ್ರೆಸ್‌ನ ಪರ್ಯಾಯ ಪಕ್ಷವಾಗಿದೆ. ಕಳೆದ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ 1 ಸ್ಥಾನವನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ. 28 ಸ್ಥಾನವನ್ನೂ ಬಿಜೆಪಿ ಗೆಲ್ಲಲಿದೆ ಎಂದ ಅವರು ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜನರೊಂದಿಗೆ ಆಟವಾಡುತ್ತಿದೆ. ಕಳೆದ 1 ವರ್ಷದಲ್ಲಿ ಯಾವುದೇ ಒಂದು ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ 2 ಬಾರಿ ಬಜೆಟ್ ಮಂಡನೆ ಮಾಡಿದರೂ ಒಂದೇ ಒಂದು ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡಿಲ್ಲ. ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾಡಿದ ಕೆಲಸಗಳನ್ನು ಈಗ ಕಾಂಗ್ರೆಸ್‌ನವರು ಉದ್ಘಾಟನೆ ಮಾಡುತ್ತಿದ್ದಾರೆ. ಒಂದೇ ಒಂದು ಶಂಕುಸ್ಥಾಪನೆ ಮಾಡುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್‌ನವರು ಗ್ಯಾರಂಟಿಯನ್ನು ಜಾರಿಗೆ ತಂದಿದ್ದು, ಅದನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ. ಈ ಗ್ಯಾರಂಟಿ ಯೋಜನೆಗಳು ಸಾಕಷ್ಟು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಇನ್ನೂ ಕೆಲವರಿಗೆ ಯೋಜನೆಯೇ ಸಿಕ್ಕಿಲ್ಲ. ಇದರ ಬಗ್ಗೆ ಶ್ವೇತಾಪತ್ರ ಹೊರಡಿಸಲು ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಿದ್ದರಾಮಯ್ಯ ಸರ್ಕಾರ ದೊಡ್ಡ ಮಟ್ಟಿನಲ್ಲಿ ಸಾಲ ಮಾಡುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರವನ್ನು ದೂರುತ್ತಿದೆ. ಆದರೆ 2014ರ ಹಿಂದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಣವನ್ನು 32ಶೇ. ನೀಡುತ್ತಿದ್ದು, 2014 ರ ನಂತರ ನಾವು 42ಶೇ. ನೀಡುತ್ತಿದ್ದೇವೆ ಎಂದು ಹೇಳಿದರು.
ರಾಜ್ಯ ನಾಯಕ ವಿಕಾಸ್ ಕುಮಾರ್ ಪುತ್ತೂರು, ಮಹಾನಗರಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ವರುಣ್ ಚೌಟ, ಲೋಹಿತ್ ಅಮೀನ್, ಬಂಟ್ವಾಳ ಚುನಾವಣಾ ಪ್ರಭಾರಿ ಜಗದೀಶ್ ಶೇಣವ, ಜಿಲ್ಲಾ ಮಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು.
ಮೋದಿಯವರಿಂದ ಐತಿಹಾಸಿಕ ರೋಡ್ ಶೋ
ಎ.14 ರಂದು ಸಂಜೆ 5.30ಕ್ಕೆ ಮಂಗಳೂರಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದ ತನಕ ಪ್ರಧಾನಿ ಮೋದಿ ಅವರು ರೋಡ್ ಶೋ ನಡೆಸಲಿದ್ದು, ಅದಕ್ಕೆ ಬೇಕಾದ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಜನರಿಂದ ಮೋದಿ ಅವರ ಮೇಲೆ ಹೂವನ್ನು ಹಾಕಲು ಅವಕಾಶ ಕಲ್ಪಿಸಲಾಗಿದ್ದು, ಮೋದಿಜೀ ಅವರು ಬರುವುದರಿಂದ ದೊಡ್ಡ ಬಲ ಬಂದಂತೆ ಆಗಲಿದೆ. -ಡಾ. ಭರತ್ ಶೆಟ್ಟಿ ವೈ., ಶಾಸಕರು, ಮಂಗಳೂರು ಉತ್ತರ