Mangalore: ಅಭಿಮಾನಿಯೋರ್ವನಿಗೆ ಪ್ರಧಾನಿಗಳಿಗೆ ವರ್ಣಚಿತ್ರ ನೀಡುವಾಸೆ

Mangalore: ಅಭಿಮಾನಿಯೋರ್ವನಿಗೆ ಪ್ರಧಾನಿಗಳಿಗೆ ವರ್ಣಚಿತ್ರ ನೀಡುವಾಸೆ


ಮಂಗಳೂರು: ಬಣ್ಣಗಳ ಜೊತೆಗೆ ಜೀವನವನ್ನು ಕಟ್ಟಿಕೊಳ್ಳಲು ಹೊರಟಿರುವ ಯುವ ಪ್ರತಿಭೆಯೋರ್ವರು ತನ್ನ ನೆಚ್ಚಿನ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತನ್ನ ಕೈಯಾರೆ ರಚಿಸಿದ ವರ್ಣಚಿತ್ರವನ್ನು ನೀಡುವ ಇಂಗಿತವನ್ನು ಮನದಲ್ಲಿ ಇಟ್ಟುಕೊಂಡು ಕಾಯುತ್ತಿದ್ದಾರೆ.

ಪುತ್ತೂರಿನ ಪಾಣಾಜೆಯ ನಿವಾಸಿ ದಿ. ಶಂಕರ ಮೂಲ್ಯ-ಲಕ್ಷ್ಮಿ ಅವರು ಪುತ್ರ ಯೋಗೀಶ್ ಕಡಂದೇಲು ಅವರು ಮೋದಿ ಅವರಿಗೆ ವರ್ಣಚಿತ್ರ ನೀಡಲು ಕಾಯುತ್ತಿರುವ ವ್ಯಕ್ತಿ.

ಇವರು ತನ್ನ ಸಣ್ಣ ಪ್ರಾಯದಲ್ಲಿಯೇ ಚಿತ್ರಕಲೆಯ ಮೇಲೆ ಆಸಕ್ತಿಯನ್ನು ಹೊಂದಿದ್ದು, ಅರಣ್ಯ ಪ್ರದೇಶದೊಳಗಿರುವ ತನ್ನ ಮನೆಯಿಂದ ಶಾಲೆಗೆ ಪ್ರತಿನಿತ್ಯ ಎರಡು ಕಿ.ಮೀ. ದೂರ ಕ್ರಮಿಸಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಪ್ರೌಢ ಶಿಕ್ಷಣದಲ್ಲಿ ಇರುವ ಸಂದರ್ಭದಲ್ಲಿ ತನ್ನ ತಂದೆಯನ್ನು ಕಳೆದುಕೊಂಡರು. ತಂದೆಯ ಅಕಾಲಿಕ ಮರಣದಿಂದ ತನ್ನ ಶಿಕ್ಷಣವನ್ನು ಮೊಟಕುಗೊಳಿಸಿ, ಕೂಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದು, ಸಂಜೆ ಬಿಡುವಿನ ಸಮಯದಲ್ಲಿ ತನ್ನ ಚಿತ್ರಕಲೆ ಅಭ್ಯಾಸವನ್ನು ಮುಂದುವರಿಸಿದ್ದು, ಅವರ ಆಶಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿ ಶಾರದಾ, ಹಾಗೂ ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಲಿತ ಹೆಗ್ಡೆ ಅವರು ಮರಳಿ ಶಿಕ್ಷಣವನ್ನು ಪಡೆಯುವಂತೆ ಪ್ರೇರೇಪಿಸಿದರು.

ನಂತರ ರೆಂಜದ ಶ್ರೀ ಗುರು ಟುಟೋರಿಯಲ್‌ನಲ್ಲಿ ನೇರವಾಗಿ ಹತ್ತನೇ ತರಗತಿಯ ಪರೀಕ್ಷೆಯ ಸಿದ್ಧತೆ ನಡೆಸಿ, ಪರೀಕ್ಷೆಯನ್ನು ಎದುರಿಸುತ್ತಾರೆ. ಅಲ್ಲಿನ ಶಿಕ್ಷಕರಾದ ಮೀನಾಕ್ಷಿ ಮಂಜುನಾಥ್ ಮತ್ತು ಮಂಜುನಾಥ್ ಅವರ ಸಂಪೂರ್ಣ ಸಹಕಾರದಲ್ಲಿ ಹತ್ತನೇ ತರಗತಿಯಲ್ಲಿ ತೇರ್ಗಡೆಗೊಂಡು, ಮುಂದೆ ಪಿಯುಸಿ ಶಿಕ್ಷಣವನ್ನು ಕೂಡ ಅಲ್ಲೇ ಪೂರೈಸುತ್ತಾರೆ. ಇದಾದ ಬಳಿಕ ಮತ್ತೊಬ್ಬ ಶಿಕ್ಷಕ ಪ್ರಕಾಶ್ ಎಂಬವರ ಪ್ರೇರಣೆಯಿಂದ ಮೈಸೂರಿನ ಚಿತ್ರಕಲಾ ಯುನಿವರ್ಸಿಟಿ ಒಂದರಲ್ಲಿ ಮೂರು ವರ್ಷಗಳ ಕಾಲ ಚಿತ್ರಕಲೆಯನ್ನು ಅಭ್ಯಾಸಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ.

ಇವರಿಗೆ ಚಿತ್ರಕಲೆ ದೈವದತ್ತವಾಗಿ ಒಲಿದು ಬಂದ ವಿದ್ಯೆ. ತನ್ನ ವಿದ್ಯಾಭ್ಯಾಸದ ದಿನಗಳಲ್ಲಿ ಚಿತ್ರಗಳನ್ನು ಬರೆದು ಬಹುಮಾನವನ್ನು ಗಿಟ್ಟಿಸಿಕೊಳ್ಳುತ್ತಾ, ಎರಡನೇ ತರಗತಿಯಲ್ಲೇ ಸ್ಲೆಟಿನಲ್ಲಿ ಚಿತ್ರ ಬರೆದು ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದರು. ಮುಂದೆ ಸ್ನೇಹಿತರ ಪ್ರೋತ್ಸಾಹವೇ ಇವರನ್ನು ಈ ಮಟ್ಟಕ್ಕೆ ಬೆಳೆಸುವಲ್ಲಿ ಸಹಕಾರಿಯಾಯಿತು ಎನ್ನುತ್ತಾರೆ ಯೋಗೀಶ್ ಕಡಂದೇಲು.

ಶಿಕ್ಷಣದ ಬಳಿಕ ತೈಲ ವರ್ಣಗಳಲ್ಲಿ ಸಾಕಷ್ಟು ಪರಿಣತಿಯನ್ನು ಪಡೆದಿದ್ದ ಇವರು ಅನೇಕ ಚಿತ್ರಗಳನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯನ್ನು ಪಡೆದಿದ್ದರು. ಇದೇ ಸಮಯ ನಾರಾಯಣ ಪ್ರಕಾಶ್ ನೆಲ್ಲಿತ್ತುಮಾರ್ ಇವರ ನೇತೃತ್ವದಲ್ಲಿ ಸುವರ್ಣ ವಾಹಿನಿ ಮತ್ತು ಈ ಟಿವಿ ವಾಹಿನಿಯ ಸಂದರ್ಶನ ಇವರ ಬೆಳವಣಿಗೆಗೆ ಮತ್ತಷ್ಟು ಪ್ರೇರಣೆಯಾಯಿತು. ಇದರಿಂದಾಗಿ ಏಷ್ಯಾದ ಅತಿ ವೇಗದ ಚಿತ್ರಗಾರ ವಿಲಾಸ್ ನಾಯಕ್ ಅವರ ಗೆಳೆತನ ಸುಯೋಗ ಒದಗಿಬಂತು. ಜೊತೆಗೆ ಜೀ ಟಿವಿ ಸರಿಗಮ ಕಾರ್ಯಕ್ರಮದ ವಿಜಯ್ ಪ್ರಕಾಶ್ ಅವರ ಭೇಟಿ, ಈ ಎಲ್ಲಾ ಅವಕಾಶಗಳು ಕೂಡ ಇವರಿಗೆ ಮತ್ತಷ್ಟು ವಿಪುಲ ಅವಕಾಶಕ್ಕೆ ದಾರಿಯಾಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ತೈಲ ಚಿತ್ರವನ್ನು ಬಿಡಿಸಿ ಅದನ್ನು ಅವರಿಗೆ ಸಮರ್ಪಿಸುವುದರ ಮೂಲಕ ಅವರಿಂದಲೂ ಸೈ ಎನಿಸಿಕೊಂಡು ತಾನೊಬ್ಬ ಸಮರ್ಥ ತೈಲವರ್ಣಚಿತ್ರ ಕಲಾವಿದನೆಂಬ ಪ್ರಶಂಸೆಗೆ ಪಾತ್ರರಾದರು. ಇದೀಗ ಪೆನ್ಸಿಲ್ ಬಾಕ್ಸ್ ಎಂಬ ಚಲನಚಿತ್ರದಲ್ಲಿ ಮೊತ್ತ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕಲಾನಿರ್ದೇಶಕನ ಸ್ಥಾನವನ್ನು ನಿಭಾಯಿಸಿ ಯಶಸ್ವಿಯಾಗಿದ್ದಾರೆ.



ಬಡ ಮಕ್ಕಳಿಗೆ ಚಿತ್ರಕಲಾ ತರಬೇತಿ: 

ಬಡತನದಿಂದ ಬೆಳೆದುಬಂದಿದ್ದು, ಬಡ ಮಕ್ಕಳಿಗೆ ಚಿತ್ರಕಲಾ ತರಬೇತಿಯನ್ನು ನೀಡಬೇಕೆಂಬ ಇಚ್ಛೆ ಇದ್ದು, ಸಧ್ಯ ಮೊಬೈಲ್ ಮೂಲಕ ತರಬೇತಿಯನ್ನು ನೀಡುತ್ತಿದ್ದು, ಶಾಲೆಯನ್ನು ತೆರೆಯುವ ಆಸೆ ಇದೆ. ಸಧ್ಯ ಮನೆಯಲ್ಲಿಯೇ ಚಿತ್ರ ಬಿಡಿಸುವ ಕಾಯಕ ಮಾಡುತ್ತಿದ್ದೇನೆ. -ಯೋಗೀಶ್ ಕಡಂದೇಲು, ತೈಲ ವರ್ಣಚಿತ್ರಗಾರ.











Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article