Mangalore: ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಆಹಾರ-ತೀವ್ರ ನಿಗಾ

Mangalore: ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಆಹಾರ-ತೀವ್ರ ನಿಗಾ

ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ಹೊಟೇಲ್, ಬೀದಿ ಬದಿ ಆಹಾರ ತಯಾರಿ ಘಟಕಗಳ ಮೇಲೆ ನಿಗಾ ಇರಿಸಲಾಗಿದ್ದು, ಕಲಬೆರಕೆ, ಬಣ್ಣಗಳ ಬಳಕೆ ಹಾಗೂ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಆಹಾರ ಪೂರೈಕೆ ಮಾಡುವ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ದ.ಕ. ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನಾ ಅಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಹಾರ ಕಲಬೆರಕೆಗೆ ಸಂಬಂಧಿಸಿ ಜಿಲ್ಲೆಯಾದ್ಯಂತ ನಿರಂತರ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದರು. 

ದ.ಕ. ಜಿಲ್ಲೆಯಲ್ಲಿ ಈವರೆಗೆ ಮಂಗಳೂರು ನಗರದಲ್ಲಿ 42, ಬಂಟ್ವಾಳದಲ್ಲಿ 18, ಪುತ್ತೂರಿನಲ್ಲಿ 32, ಬೆಲ್ತಂಗಡಿಯ್ಲಿ 22 ಹೊಟೇಲ್ ಹಾಗೂ ಆಹಾರ ತಯಾರಿ ಘಟಕಗಳಿಗೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ. ಮಂಗಳೂರಿನ ಮಾಲ್ ಒಂದರ ಎರಡು ಆಹಾರ ಘಟಕಗಳಲ್ಲಿ ತಯಾರಾಗುತ್ತಿದ್ದ ಗೋಬಿ ಮಂಚೂರಿಯಲ್ಲಿ ಕಲರ್ ಬಳಸಲಾಗುತ್ತಿದ್ದು, ಆ ಘಟಕಗಳಿಗೆ ನೋಟೀಸು ನೀಡಿ ದಂಡ ಹಾಕಲಾಗಿತ್ತು. ಅದರ ವರದಿ ಆಧಾರದಲ್ಲಿಯೇ ರಾಜ್ಯದಲ್ಲಿ ಗೋಬಿಮಂಚೂರಿ ಕಲರ್ ಬಳಕೆ ನಿಷೇಧಕ್ಕೆ ಕ್ರಮ ವಹಿಸಲಾಗಿತ್ತು ಎಂದು ತಿಳಿಸಿದರು. 

ನಗರದ ಹೊಟೇಲ್‌ಗಳು, ಆಹಾರ ಘಟಕಗಳಿಂದ ವಿವಿಧ ಆಹಾರ ಪೂರೈಕೆದಾರರಿಂದ ತರಿಸಲಾಗುವ ಸಂದರ್ಭದಲ್ಲಿಯೂ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಬಳಸಲಾಗುತ್ತಿದ್ದರೂ, ಆಹಾರ ಸುರಕ್ಷತಾ ಇಲಾಖೆಯಿಂದ ಕ್ರಮ ವಹಿಸಲಾಗುತ್ತಿಲ್ಲ ಎಂಬ ಪ್ರಶ್ನೆಗೆ, ಈ ಬಗ್ಗೆ ಗಮನ ಹರಿಸಲಾಗಿದೆ. ಆಹಾರ ಗುಣಮಟ್ಟ ನಿಯಮದ ಪ್ರಕಾರ ಬಿಸಿಯಾದ ಆಹಾರವನ್ನು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಕಟ್ಟಿ ನೀಡುವಂತಿಲ್ಲ. ಆಹಾರವನ್ನು ಪೂರೈಕೆ ಮಾಡಲು ಅಲ್ಯುಮಿನಿಯಂ ಫಾಯಿಲ್ ಹಾಗೂ ಇತರ ಸುರಕ್ಷಿತ ವಿಧಾನಗಳನ್ನು ಮಾತ್ರವೇ ಬಳಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿ ಡಾ. ತಿಮ್ಮಯ್ಯ ಸ್ಪಷ್ಟಪಡಿಸಿದರು. 

ಶಾಖಾಘಾತದ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ ಡಾ. ನವೀನ್ ಚಂದ್ರ ಕುಲಾಲ್, ವಾತಾವರಣದಲ್ಲಿ ಸಾಧಾರಣ ಉಷ್ಣತೆಗಿಂತ 4.5ಡಿಗ್ರಿ ಸೆಲ್ಸಿಯಸ್ಗಿಂತ 6.4 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾದಾಗ ಶಾಖಾಘಾತ ಸಂಭವಿಸುತ್ತದೆ. ಇದರಿಂದ ಕೈಕಾಲು ಬಾವು, ಮೈಮೇಲೆ ಬೆವರು ಸಾಲೆ, ಮಾಂಸಖಂಡದಲ್ಲಿ ಊತ, ಎದೆಯಲ್ಲಿ ಹೃದಯಾಘಾತ ಮಾದರಿ ನೋವು ಕಾಣಿಸಿಕೊಳ್ಳಬಹುದು ಎಂದರು. 

ನೀರಿನಂಶ ಅಧಿಕವಾಗಿ ಬಳಸುವುದು, ಅನಗತ್ಯವಾಗಿ ಬಿಸಿಲಿಗೆ ಓಡಾಟ, ಸೆಖೆಗೆ ಹಿತವಾದ ಬಟ್ಟೆ ಬಳಕೆ, ಮಕ್ಕಳು ಹಾಗೂ ಹಿರಿಯ ನಾಗರಿಕರು ಬಿಸಿಲಿಗೆ ಮೈಯೊಡ್ಡದಂತೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ ಎಂದು ಸಲಹೆ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article