Mangalore: ಕೇಂದ್ರ ಅನಿವಾಸಿ ಭಾರತೀಯರ ಪ್ರತ್ಯೇಕ ಸಚಿವಾಲಯಕ್ಕೆ ಕಾಂಗ್ರೆಸ್ ಗ್ಯಾರಂಟಿ: ಆರತಿಕೃಷ್ಣ
ಮಂಗಳೂರು: ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ ಮರು ಆರಂಭಿಸಲಾಗುವುದು. ಇದು ಲೋಕಸಭಾಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿದ ಗ್ಯಾರಂಟಿಗಳಲ್ಲಿ ಸೇರಿದೆ ಎಂದು ರಾಜ್ಯ ಅನಿವಸಿ ಭಾರತೀಯ ಸಮಿತಿ (ಯನ್‌ಆರ್‌ಐ ಫಾರಂ) ಉಪಾಧ್ಯಕ್ಷೆ ಆರತಿಕೃಷ್ಣ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಲ್ಲಿ ಮನಮೋಹನ್‌ಸಿಂಗ್ ಸರ್ಕಾರವಿದ್ದಾಗ ಪ್ರತ್ಯೇಕ ಸಾಗರೋತ್ತರ ಸಚಿವಾಲಯವಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅನಿವಾಸಿ ಭಾರತೀಯರಿಗಾಗಿ ಕೆಲಸ ಮಾಡುತ್ತಿದ್ದ ಸಚಿವಾಲಯವನ್ನು ವಿದೇಶಾಂಗ ಸಚಿವಾಲಯದಲ್ಲಿ ಸೇರ್ಪಡೆಗೊಳಿಸಲಾಯಿತು ಎಂದು ತಿಳಿಸಿದರು.
ಅನಿವಾಸಿ ಭಾರತೀಯರಿಗೆ ಕೇಂದ್ರದಲ್ಲಿ ಕೂಡ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎನ್ನುವುದನ್ನು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ವಿದ್ಯಮಾನಗಳು ದೃಢಪಡಿಸಿದೆ. ಅಮೇರಿಕಾದಲ್ಲಿಶಿಕ್ಷಣ ನಡೆಸುತ್ತಿದ್ದ 11 ವಿದ್ಯಾರ್ಥಿಗಳು ಅಸಹಜ ರೀತಿಯಲ್ಲಿ ಮರಣವನ್ನಪ್ಪಿದ್ದಾರೆ. ಉಕ್ರೇನ್ನಲ್ಲಿ ನಮ್ಮ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸಿದರು ಎಂದು ಅವರು ಹೇಳಿದರು.
ರಾಜ್ಯ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ರಾಜ್ಯ ಯನ್‌ಆರ್‌ಐ ಫಾರಂ ಮರು ಆರಂಭಿಸಲಾಗಿದೆ. ಕೇರಳ ಮಾದರಿ ಅನಿವಾಸಿ ಭಾರತೀಯರಿಗೆ ರಾಜ್ಯದಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ರಾಜ್ಯದ ಸುಮಾರು 2.5 ಲಕ್ಷ ಅನಿವಾಸಿ ಭಾರತೀಯರು ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದಾರೆ. ಇವರಲ್ಲಿ ಹೆಚ್ಚಿನವರು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಪ್ರತ್ಯೇಕ ಸಚಿವಾಲಯ ಇರುವಾಗ ವಿದೇಶಗಳಲ್ಲಿ ಅನಿವಾಸಿ ಭಾರತೀಯರು ವಿವಿಧ ಸಮಸ್ಯೆಗಳನ್ನು ಎದುರಿಸುವ ಸಂದರ್ಭ ನೆರವಿಗೆ ಧಾವಿಸಲು ಸಾಧ್ಯವಾಗುತ್ತದೆ. ಕೊರೊನಾ ಸಂದರ್ಭ ರಾಜ್ಯ ಹಾಗೂ ಕೇಂದ್ರ ಎರಡೂ ಕಡೆಗಳಲ್ಲಿ ಬಿಜೆಪಿ ಸರ್ಕಾರಗಳಿತ್ತು. ಆ ಸಂದರ್ಭ ತುಂಬಾ ಮಂದಿ ಅನಿವಾಸಿ ಬಾರತೀಯರು ಸಮಸ್ಯೆಯಲ್ಲಿ ಸಿಲುಕಿಕೊಂಡರು. ತನ್ನನ್ನು ಸಂಪರ್ಕಿಸಿದ ಅನೇಕ ಮಂದಿ ಅನಿವಾಸಿ ಭಾರತೀಯರಿಗೆ ಸಹಾಯ ಮಾಡಿದ್ದೇನೆ. ಈ ಹಿಂದೆ ವಾಷಿಂಗ್ಟನ್ ರಾಯಭಾರಿ ಕಚೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ದುಡಿದ ಅನುಭವದ ಸಂಪರ್ಕದಿಂದ ಇದು ಸಾಧ್ಯವಾಯಿತು ಎಂದು ಅವರು ವಿವರಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ, ಕಾಂಗ್ರೆಸ್ ದಕ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಅಶ್ರಫ್, ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ಎ.ಸಿ.ವಿನಯರಾಜ್, ಶುಭೋದಯ ಆಳ್ವ ಉಪಸ್ಥಿತರಿದ್ದರು.