Mangalore: ಗೆಲುವಿನ ಅಂತರ ಹೆಚ್ಚುವುದು ನಮ್ಮ ಮುಂದಿರುವ ಗುರಿ: ಮಾಳವಿಕಾ ಅವಿನಾಶ್

Mangalore: ಗೆಲುವಿನ ಅಂತರ ಹೆಚ್ಚುವುದು ನಮ್ಮ ಮುಂದಿರುವ ಗುರಿ: ಮಾಳವಿಕಾ ಅವಿನಾಶ್


ಮಂಗಳೂರು: ಪ್ರಧಾನಿ ಮೋದಿ ಮತ್ತವರ ಟೀಂ ಗೆಲ್ಲುವುದು ಶತಸಿದ್ಧ. ಇಲ್ಲಿ ಕ್ಯಾ. ಬೃಜೇಶ್ ಚೌಟ ಗೆಲ್ಲುವುದು ಖಚಿತ. ನಾವೀಗ ಇವರ ಗೆಲುವಿನ ಮತಗಳ ಅಂತರ ಹೆಚ್ಚಿಸುವತ್ತ ಗಮನ ಹರಿಸಬೇಕು. ಆಗಲೇ ಪಕ್ಷದಲ್ಲಿ ನಾರಿ ಶಕ್ತಿ ಏನೆಂಬುದು ಸಾಬೀತಾಗಲಿದೆ. ಪ್ರಧಾನಿ ಮೋದಿಯವರ ಆಸೆಯೂ ಇದೆ ಆಗಿದೆ. ಅದಕ್ಕೆಂದೇ ಅವರು ಪ್ರಧಾನಿಯಾದ ಬಳಿಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಯೋಜನೆಗಳನ್ನು ರೂಪಿಸಿದ್ದಾರೆ. ಈ ಚುನಾವಣೆಯಲ್ಲಿ ಮಹಿಳೆಯರು ಮೋದಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಬಿಜೆಪಿ ವಕ್ತಾರೆ, ನಟಿ ಮಾಳವಿಕಾ ಅವಿನಾಶ್ ಹೇಳಿದರು.

ಗುರುಪುರ ಕೈಕಂಬದ ಮಾತೃಭೂಮಿ ಸಭಾಂಗಣದಲ್ಲಿ ಮಂಗಳವಾರ ಉತ್ತರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ ‘ನಾರಿಶಕ್ತಿ’ ಸಮಾವೇಶದಲ್ಲಿ ಮಾತನಾಡಿ, ಮೋದಿಯವರ ಜನಪರ ಯೋಜನೆಗಳ ಎದುರು ಕಾಂಗ್ರೆಸ್ ಗ್ಯಾರಂಟಿ ಏನೂ ಅಲ್ಲ. ಸ್ವಚ್ಛ ಭಾರತದ ಶೌಚಾಲಯ, ಉಜ್ವಲ ಗ್ಯಾಸ್, ಜಲಜೀವನ್ ಮಿಷನ್, ಆಯುಷ್ಮಾನ್, ಮಾತೃ ವಂದನಾ ಮತ್ತಿತರ ಯೋಜನೆಗಳಿಗೆ ಕಾಂಗ್ರೆಸ್ ಗ್ಯಾರಂಟಿ ಹೋಲಿಕೆಯೇ ಅಲ್ಲ ಎಂದರು.

ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ. ಮಂಜುಳಾ ರಾವ್ ಮಾತನಾಡಿ, ನಾರಿಶಕ್ತಿಗೆ ಪ್ರಧಾನಿ ಮೋದಿ ಪ್ರಾಮುಖ್ಯತೆ ನೀಡಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಮಾತನಾಡಿ, ಪ್ರಧಾನಮಂತ್ರಿಯವರ ಸಂಕಲ್ಪ ಈಡೇರಿಸಲು ಈ ಜಿಲ್ಲೆಯಿಂದ ಅವರ ಕಷ್ಟಗಳಿಗೆ ಸ್ಪಂದಿಸುವುದು ಕಷ್ಟವೇನಲ್ಲ. ಜಿಲ್ಲೆಯನ್ನು ಹಿಂದೂತ್ವದ ಭದ್ರಕೋಟೆಯನ್ನಾಗಿ ಉಳಿಸುವ ಕೆಲಸ ಮಾಡುವೆ. ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುವೆ ಎಂದು ಹೇಳಿದರು.

ಮ೦ಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಪ್ರಧಾನಿ ಮೋದಿಯವರು ಎ. ೧೪ಕ್ಕೆ ಮಂಗಳೂರಿಗೆ ಬರಲಿದ್ದು, ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ. ಅಂದು ಜಿಲ್ಲೆಯ ಪ್ರತಿ ಬೂತ್‌ನಿಂದ ಕನಿಷ್ಠ ೨ರಂತೆ ೪೫೦ಕ್ಕೂ ಮಿಕ್ಕ ಬಸ್ಸುಗಳಲ್ಲಿ ಗೋಲ್ಡ್ ಪಿಂಚ್ ಮೈದಾನಕ್ಕೆ ಕಾರ್ಯಕರ್ತರು ಆಗಮಿಸಲಿದ್ದಾರೆ. ಆ ಸಂದರ್ಭದಲ್ಲಿ ಮಹಿಳೆಯರು ಮುಂಚೂಣಿಯಲ್ಲಿರಬೇಕು. ಚುನಾವಣೆಯಂದು ದೊಡ್ಡ ಮಟ್ಟದಲ್ಲಿ ಮತದಾನ ಆಗುವಂತೆ ನೋಡಿಕೊಳ್ಳಬೇಕು. ನಿಮ್ಮ ಶಕ್ತಿ ಎ. ೨೬ರಂದು ಪ್ರದರ್ಶನಗೊಳ್ಳಬೇಕು ಎಂದರು.

ಮಂಗಳೂರು ಉತ್ತರ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಪಕ್ಷ ಪ್ರಮುಖರಾದ ರೂಪಾ ಡಿ. ಬಂಗೇರ, ಶಾಂತಿ ಪ್ರಸಾದ್ ಹೆಗ್ಡೆ, ಉಪಮೇಯರ್ ಸುನೀತಾ, ತಿಲಕ್‌ರಾಜ್ ಕೃಷ್ಣಾಪುರ, ಬಬಿತಾ ರವೀಂದ್ರ, ಲೋಹಿತ್ ಅಮೀನ್, ಸಂದೀಪ್ ಪಚ್ಚನಾಡಿ, ರಣದೀಪ್ ಕಾಂಚನ್, ವಜ್ರಾಕ್ಷಿ ಶೆಟ್ಟಿ, ಪವಿತ್ರ ನಿರಂಜನ್ ಹಾಗೂ ಸ್ವಪ್ನ, ಸುಮಾ ಶೆಟ್ಟಿ ಸ್ಥಳೀಯ ಮುಖಂಡರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ರೇಖಾ ರಾಜೇಶ್ ಸ್ವಾಗತಿಸಿ, ಮೋರ್ಚಾದ ಉಪಾಧ್ಯಕ್ಷೆ ನಯನಾ ಕೋಟ್ಯಾನ್ ವಂದಿಸಿದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article