Mangalore: ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜು ಗ್ರಾಜ್ಯುವೇಶನ್ ಕಾರ್ಯಕ್ರಮ
ನಮ್ಮಿಂದಲೇ ನಮ್ಮ ಭವಿಷ್ಯದ ನಿರ್ಮಾಣ ಸಾಧ್ಯ: ಪ್ರೊ. ನರೇಂದ್ರ ಎಲ್. ನಾಯಕ್
ಮಂಗಳೂರು: ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನೀವು ಕಳೆಯಲಿರುವ ಮುಂದಿನ ಬೆರಳೆಣಿಕೆಯ ದಿನಗಳು ನಿಮ್ಮ ಬದುಕನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಆದ್ದರಿಂದ ಅದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತ ಪ್ರಜೆಗಳಾಗಿ, ಸಾಧಕರಾಗಿ ಹೊರಹೊಮ್ಮಬೇಕು ಎಂದು ಎಕ್ಸ್‌ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹೇಳಿದರು.
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ವಿದ್ಯಾರ್ಥಿಗಳ ಗ್ರಾಜ್ಯುವೇಶನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಕ್ಸ್‌ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ನಿಮ್ಮ ಭವಿಷ್ಯದ ನಿರ್ಮಾತೃಗಳು ನೀವೇ. ಬದುಕು ಸಕಾರಾತ್ಮಕವಾಗಿ ಬದಲಾಗಬೇಕೆಂದರೆ ಅದರ ಆರಂಭ ಈ ಘಟ್ಟದಲ್ಲೇ ಆಗಬೇಕು. ಆ ಮೂಲಕ ನಿಮ್ಮ ಯಶಸ್ಸಿನ ವ್ಯಾಖ್ಯಾನವನ್ನು ಇಂದೇ ಬರೆಯಲು ಆರಂಭಿಸಬೇಕು. ಉತ್ತಮ ಮಾನವತೆಯೊಂದಿಗೆ ಯಶಸ್ವಿಯಾಗಿ ಬದುಕಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವಿದ್ಯಾರ್ಥಿಗಳಾದ ಲಿಖಿತಾ, ಸುರವಿ ಸುಧೀರ್, ಮಿಷ್ಟಿ ನಂಜಪ್ಪ, ಸಂಜಿತ್ ಹೆಗ್ಡೆ, ಹರ್ಷವರ್ಧನ್, ಪುಷ್ಯಂತ್ ಸಿಂಹ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ ಸ್ವಾಗತಿಸಿ, ವಿದ್ಯಾರ್ಥಿ ಸಂಸತ್ತಿನ ಮುಖಂಡ ಅಭಿನಂದ ಬಿಜು ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಜಾಸ್ಮಿನ್ ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು.