Mangalore: ಮಂಗಳೂರಿನಲ್ಲಿ ಹಸಿರಿಗೆ ಕೊರತೆ-ಅಪಾಯದ ಸಂಕೇತ: ಜೀತ್ ಮಿಲನ್ ರೋಚ್
ಮಂಗಳೂರು: ಪರಿಸರ ನೀತಿಯ ಪ್ರಕಾರ ಪ್ರತೀ ನಗರವು ಕನಿಷ್ಠ ಶೇಕಡಾ ೩೫ರಷ್ಟು ಹಸಿರಿನಿಂದ ತುಂಬಿರಬೇಕು. ಆದರೆ, ಮಂಗಳೂರು ನಗರ ಕೇವಲ ಶೇಕಡಾ ೬.೨೪ರಷ್ಟು ಮಾತ್ರವೇ ಹಸಿರನ್ನು ಆವರಿಸಿದೆ. ಇದು ಅಪಾಯದ ಸಂಕೇತ ಎಂದು ಪರಿಸರವಾದಿ ಜೀತ್ ಮಿಲನ್ ರೋಚ್ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ವಿಶ್ವ ಭೂಮಿ ದಿನಾಚರಣೆಯಂಗವಾಗಿ ಸುಯೆಝ್ ಮಂಗಳೂರು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ನಗರ ಕಾಡು ಅಥವಾ ಮಿಯವಾಕಿ ಕಾಡಿನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇರುವೆಯಿಂದ ಆನೆಯವರೆಗೆ ಪರಿಸರದಲ್ಲಿ ಎಲ್ಲಾ ಪ್ರಾಣಿಪಕ್ಷಿಗಳು ಕಾಡಿನ ರಚನೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಆದರೆ, ಮನುಷ್ಯರು ಮಾತ್ರ ಪರಿಸರ ನಾಶಕ್ಕೆ ತನ್ನಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಕಾಡನ್ನು ನಿರ್ಮಾಣ ಮಾಡುವುದು ಕಷ್ಟ ಸಾಧ್ಯ. ಆದರೆ, ಇಂತಹುದೇ ಕಾಡಿನ ಪುನರ್ ಸೃಷ್ಟಿಗೆ ಹಾಗೂ ಇರುವ ಕಾಡಿನ ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ನಗರಗಳಿಗೆ ಮಿಯಾವಾಕಿ ಕಾಡು ಒಂದು ಅತ್ಯುತ್ತಮವಾದ ಪರಿಹಾರವಾಗಿದೆ. ಅತೀ ಕಡಿಮೆ ಪ್ರದೇಶದಲ್ಲೂ ತಮ್ಮ ತಮ್ಮ ಮನೆಗಳಲ್ಲಿಯೂ ಇಂತಹ ಕಾಡುಗಳನ್ನು ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದರು.
ಅಭಿವೃದ್ಧಿಎಂದರೆ ಪರಿಸರವನ್ನು ನಾಶ ಮಾಡುವುದಲ್ಲ. ಯುವ ಜನರು ಉತ್ತಮ ಪರಿಸರ ನಿರ್ಮಾಣz ಜವಾಬ್ದಾರಿಯನ್ನು ವಹಿಸಬೇಕು. ಮುಂದಿನ ಪೀಳಿಗೆ ಉತ್ತಮ ಗಾಳಿ, ನೀರು ಸೇವಿಸಬೇಕಾದರೆ ಕಾಡಿನ ರಚನೆ ಅನಿವಾರ್ಯ ಎಂದರು.
ಜೀತ್ ಮಿಲನ್ ಹಾಗೂ ಅವರತಂಡ ಈಗಾಗಲೇ ಮಂಗಳೂರು ನಗರದಲ್ಲಿ ೩೦ ಮಿಯಾವಾಕಿ ಕಾಡುಗಳನ್ನು ನಿರ್ಮಾಣ ಮಾಡಿದ್ದಾರೆ. ವನ ಚಾರಿಟೆಬಲ್ ಟ್ರಸ್ಟ್ ಮೂಲಕ ತಮ್ಮ ಯೋಜನೆಯನ್ನು ನಗರದ ಹೆಚ್ಚು ಹೆಚ್ಚು ಶಾಲಾ, ಕಾಲೇಜುಗಳಿಗೆ ವಿಸ್ತರಿಸುತ್ತಿದ್ದಾರೆ.
ಸುಯಝ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಧಿಕಾರಿ ಡಾ. ರೇಶ್ಮಾ ಉಳ್ಳಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ರಾಕೇಶ್ ಶೆಟ್ಟಿ, ಸೇಫ್ಟಿ ವಿಭಾಗದ ಅಧಿಕಾರಿಗಳಾದ ಸನೂಪ್ ವೆಟ್ಟಿಲ್, ಸುಫಿಯಾನ್, ಗ್ರಾಹಕ ಸೇವಾ ವಿಭಾಗದಅಧಿಕಾರಿ ವೆರಿನಾಜೊವಿಟಾ ಪಿಂಟೊ, ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕರುಗಳಾದ ಪ್ರೊ. ವಸಂತಿ ಪಿ., ಅರುಣಾಕುಮಾರಿ, ಉಪನ್ಯಾಸಕರುಗಳಾದ ಫಿರ್ದೋಸ್ ತೋನ್ಸೆ, ಮೆಹ್ರೋಝ್ ತೋನ್ಸೆ, ವಿನುತಾ, ಅಮೃತಾ, ಶ್ರೀಕಲಾ, ಎಂಎಸ್‌ಡಬ್ಲ್ಯೂ ಹಾಗೂ ಬಿಎಸ್ಸಿ ಪದವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

