Mangalore: ರೈಲ್ವೇ ಇಲಾಖೆಯನ್ನೂ ಮಾರಲು ಹುನ್ನಾರ: ಸದಾಶಿವ ಉಳ್ಳಾಲ್
ಮಂಗಳೂರು: ಭೂನ್ಯಾಯ ಮಂಡಳಿ, ಉಳುವವನೇ ಭೂಮಿಯೊಡೆಯ, ಲೋನ್ ಮೇಳ, ಬ್ಯಾಂಕ್ ರಾಷ್ಟ್ರೀಕರಣ, ಮಂಗಳೂರಿಗೆ ಎನ್‌ಎಂಪಿಟಿ, ವಿಮಾನ ನಿಲ್ದಾಣ ಬಂದಿದ್ದು ಕಾಂಗ್ರೆಸ್ ಅವಧಿಯಲ್ಲಿ, ಆದರೆ ಇವೆಲ್ಲವನ್ನೂ ಮಾರಾಟ ಮಾಡಿರುವ ಮೋದಿಯವರು ಈಗ ರೈಲ್ವೇ ಇಲಾಖೆಯನ್ನೂ ಧನಿಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆಂದು ಮೂಡಾದ ಅಧ್ಯಕ್ಷ ಸದಾಶಿವ ಉಳ್ಳಾಲ್ ಟೀಕಿಸಿದ್ದಾರೆ.
ಶನಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ನೀಡಿದ್ದ ಪ್ರಕಾರ ಹತ್ತು ವರ್ಷಗಳಲ್ಲಿ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದರಿಂದ ಆರು ಕೋಟಿ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣ ಅದಾನಿಗೆ ಹೋಗಿದ್ದರಿಂದ ಸ್ಥಳೀಯರು ಕೆಲಸ ಕಳೆದುಕೊಂಡಿದ್ದಾರೆ. ಬಡವರು ಹತ್ತು ರೂಪಾಯಿ ಸಾಲ ಬಾಕಿಯಿಟ್ಟರೆ ಬ್ಯಾಂಕ್‌ನವರು ಮನೆ ಬಾಗಿಲಿಗೆ ಹೋಗುತ್ತಾರೆ. ಆದರೆ ಮೋದಿ ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಬೆಳೆಗೆ ಸೂಕ್ತವಾದ ಬೆಲೆ ನೀಡುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದರೂ ಮೋದಿ ಸರ್ಕಾರ ಸ್ಪಂದಿಸದ ಕಾರಣ ಸಾವು ಸಂಭವಿಸಿದರೂ ಕ್ರಮ ಕೈಗೊಳ್ಳಲಿಲ್ಲ. ಈಡಿ, ಐಟಿ ಸಂಸ್ಥೆಗಳನ್ನು ದುರುಪಯೋಗಪಡಿಸಿ ಆಡಳಿತ ದುರುಪಯೋಗಪಡಿಸಿದರು. ನೋಟ್ ಬ್ಯಾನ್‌ನಿಂದ 130 ಮಂದಿ ಸತ್ತರೂ ಚಕಾರ ಎತ್ತದ ಮೋದಿ ಸರ್ಕಾರ, ಎಲೆಕ್ಷನ್ ಕಮಿಷನರ್, ಆರ್‌ಬಿಐ ಗವರ್ನರ್‌ರನ್ನು ರಾತ್ರೋರಾತ್ರಿ ರಾಜಿನಾಮೆ ನೀಡಲು ಕೇಂದ್ರ ಸರ್ಕಾರ ಕಾರಣ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುವ ಭರವಸೆ ನೀಡಿದ್ದು. ಹಣ ಒಬ್ಬರಿಗೂ ಸಿಕ್ಕಿಲ್ಲ ಎಂದು ಕಿಡಿಕಾರಿದರು.
2008ರಲ್ಲಿ ಗುರುಪುರದಲ್ಲಿ 100 ಎಕ್ರೆ ಜಮೀನು ಪ್ಲಾಸ್ಟಿಕ್ ಪಾರ್ಕಗೆ ಮಂಜೂರಾಗಿದ್ದರೂ ಯಾವುದೇ ಕೆಲಸ ಆಗದ ಕಾರಣ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಭಗವಂತ ಖೂಬಾ ಅವರೇ ಸ್ಥಳಕ್ಕೆ ಭೇಟಿ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದರೂ ಈ ವಿಚಾರದಲ್ಲಿ ಸಂಸದರು ಚಕಾರ ಎತ್ತಿಲ್ಲ. ಲಾಭದಲ್ಲಿದ್ದ ಕಾರ್ಪೊರೇಷನ್, ಸಿಂಡಿಕೇಟ್, ವಿಜಯಾ ಬ್ಯಾಂಕ್‌ಗಳನ್ನು ನಷ್ಟದಲ್ಲಿದ್ದ ಯೂನಿಯನ್, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾಕ್ಕೆ ವಿಲೀನ ಮಾಡಿದರು. ಮತ್ತೆ ಬಿಜೆಪಿ ಆಡಳಿತಕ್ಕೆ ಬಂದರೆ ಪರಿಸ್ಥಿತಿ ಹೇಗಿರಬಹುದೆಂದು ಮತದಾರರು ಯೋಚಿಸಬೇಕು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 24 ಗಂಟೆಯಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
1876 ಬೂತ್‌ಗಳನ್ನು ಸಂಪರ್ಕಿಸಿ ಗ್ಯಾರಂಟಿ ಯೋಜನೆಗಳಿ ತಪುಪಿದೆಯೇ ಎನ್ನುವ ಬಗ್ಗೆ ಮಾಹಿತಿ ಪಡೆಯಲಾಗಿದ್ದು ಶೇ.80 ಜನರಿಗೆ ಲಭಿಸಿರುವುದಾಗಿ ಗೊತ್ತಾಗಿದೆ. ಯೋಜನೆಗಳು ಸಿಗದವರ ಪಟ್ಟಿ ಸಿದ್ಧಪಡಿಸಲಾಗಿದೆ. ದೇಶದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ನೀಡಿದ ಗ್ಯಾರಂಟಿಗಳು ಜಾರಿಯಾಗುವುದರಲ್ಲಿ ಯಾವುದೇ ಸಂದೇಹ ಬೇಡ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ ಕಾಂಗ್ರೆಸ್ ಆಡಳಿತಕ್ಕೆ ಬರಲು ಕೈಜೋಡಿಸಿ ಎಂದು ಸದಾಶಿವ ಉಳ್ಳಾಲ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಉಳ್ಳಾಲ ಬ್ಲಾಕ್ ಅಧ್ಯಕ್ಷ ಮುಸ್ತಫಾ ಮಲಾರ್, ಎಐಸಿಸಿ ಅಲ್ಪಸಂಖ್ಯಾತ ವಿಭಾಗ ವೀಕ್ಷಕ ಜಾನ್ ಕೆನಡಿ, ಪ್ರಮುಖರಾದ ನೀರಜ್ ಪಾಲ್, ದುರ್ಗಾ ಪ್ರಸಾದ್, ಆರಿಫ್, ಅಭಿಷೇಕ್ ಉಳ್ಳಾಲ್ ಉಪಸ್ಥಿತರಿದ್ದರು.
