Putturu: ಕಾಂಗ್ರೇಸ್ ಅಭ್ಯರ್ಥಿಗೆ ‘ಜೈ’ ಎಂದ ಜೆಡಿಎಸ್ ಮುಖಂಡರು
ಪುತ್ತೂರು: ಕೋಮುವಾದಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಈಗ ಬೇಕಾಬಿಟ್ಟಿ ಹೇಳಿಕೆ ನೀಡುವ ಜೆಡಿಎಸ್ ಮುಖಂಡರ ವರ್ತನೆಯಿಂದ ಮನಸ್ಸಿಗೆ ಬೇಸರ ಉಂಟಾಗಿದ್ದು, ಜಾತ್ಯತೀತ ನೆಲೆಯಲ್ಲಿದ್ದ ಜೆಡಿಎಸ್ ಪಕ್ಷದಲ್ಲಿ ಈಗ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಪಕ್ಷದ ಗುರುತರವಾದ ಹುದ್ದೆಗಳಿಂದ ದೂರ ಉಳಿದು ದಕ ಜಿಲ್ಲಾ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಜೆಡಿಎಸ್ ಮುಖಂಡರು ತಿಳಿಸಿದರು.
ಪುತ್ತೂರು ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ, ಪುತ್ತೂರು ಜೆಡಿಎಸ್ ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಅವರು ಮಾತನಾಡಿ, ಕಾಂಗ್ರೇಸ್ ಪಕ್ಷ ತನ್ನ ಜಾತ್ಯತೀತ ಚಿಂತನೆಯನ್ನು ಉಳಿಸಿಕೊಂಡಿದೆ. ಹಾಗಾಗಿ ನಾವೆಲ್ಲಾ ಜಾತ್ಯತೀತ ಚಿಂತನೆಯಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೆವು. ಆದರೆ ಈಗ ಜೆಡಿಎಸ್ ಪಕ್ಷದ ಮುಖಂಡ ಹೇಳಿಕೆಗಳು ಮರ್ಮಾಘಾತ ಉಂಟು ಮಾಡುತ್ತಿವೆ. ಹಾಗಾಗಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೇಸ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಅವರು ತಿಳಿಸಿದರು. ನಾವು ಕಾಂಗ್ರೇಸ್ ಪಕ್ಷ ಸೇರುವ ವಿಚಾರ ಇಲ್ಲ. ಅಲ್ಪಸಂಖ್ಯಾತರಿಗೆ ಜೆಡಿಎಸ್ ಪಕ್ಷದಲ್ಲಿ ಇಂದು ನೆಲೆಯೇ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಮುಖಂಡ ಹೇಳಿಕೆಗಳಿಂದ ತಟಸ್ಥರಾಗಿ ಉಳಿಯಲು ನಿರ್ಧಾರ ಮಾಡಿದ್ದಾರೆ. ಅವರೆಲ್ಲಾ ಕಾಂಗ್ರೇಸ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳುವಂತೆ ವಿನಂತಿಸುವುದಾಗಿ ಅವರು ತಿಳಿಸಿದರು.
ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್‌ಗೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ನಷ್ಟ ಉಂಟಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಈಗಾಗಲೇ ಜೆಡಿಎಸ್ ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕ್ಯಾರೇ ಮಾಡದ ಸ್ಥಿತಿಯಲ್ಲಿ ಜೆಡಿಎಸ್ ಮುಖಂಡರಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಲು ಪಣತೊಟ್ಟು ನಿಂತ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪಧ್ಮರಾಜ್ ಆರ್ ಪೂಜಾರಿ ಅವರಿಗೆ ಬೆಂಬಲ ನೀಡುವುದು ಅತೀ ಅಗತ್ಯವಾಗಿದೆ. ಜೆಡಿಎಸ್ ಪಕ್ಷದಲ್ಲಿ ಜಿಲ್ಲಾ ಮುಖಂಡರಾದ ಹಾರೂನ್ ರಶೀದ್, ಹಕೀಂ ವಾಮಂಜೂರು, ತಾಲೂಕು ಮುಖಂಡರಾದ ಪಿಎಂ ಇಬ್ರಾಹಿಂ ಪರ್ಪುಂಜ, ಮಹಮ್ಮದ್ ಗೋಳಿಕಟ್ಟೆ ಹಾಗೂ ಸವಾಝ್ ಬಂಟ್ವಾಳ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದು, ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲ ನೀಡುವ ಮೂಲಕ ಜಾತ್ಯತೀತ ನಿಲುವಿಗೆ ನಾವು ಕೊಡುಗೆ ನೀಡಲಿರುವುದಾಗಿ ತಿಳಿಸಿದರು.