Putturu: ಜಿಲ್ಲೆಯ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಶೂನ್ಯ: ಬಿ. ರಮಾನಾಥ ರೈ
ಪುತ್ತೂರು: ಇಡೀ ದೇಶದಲ್ಲಿಯೇ ದ.ಕ.ಜಿಲ್ಲೆಯಷ್ಟು ಅಭಿವೃದ್ಧಿ ಹೊಂದಿದ ದೇಶ ಬೇರೊಂದಿಲ್ಲ. ಇಲ್ಲಿ ಎಲ್ಲಾ ವ್ಯವಸ್ಥೆಗಳಿದ್ದು, ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಸಂಸದರು ಕಾರಣ. ಬಿಜೆಪಿ ಸರ್ಕಾರದ ಕಾಲದಲ್ಲಿ ಹೇಳಿಕೊಳ್ಳುವಂತಹ ಒಂದೇ ಒಂದು ಅಭಿವೃದ್ಧಿ ಕೆಲಸ ನಡೆದಿಲ್ಲ. ಅವಿಭಜಿತ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಮತ್ತು ಸಂಸದರ ಕೊಡುಗೆ ಏನೂ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ ಹೇಳಿದರು.
ಮಂಗಳವಾರ ಸಂಜೆ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಕೊಡುಗೆಗಳಾದ ಮಂಗಳೂರು ಏರ್‌ಫೋಟ್‌ನ್ನು ಅದಾನಿಗೆ ಮಾರಾಟ ಮಾಡಿದ್ದು, ಇಲ್ಲಿನ ವಿಜಯಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್‌ಗಳನ್ನು ಗುಜರಾತಿನೊಂದಿಗೆ ವಿಲೀನ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯವನ್ನು ತಮ್ಮದ್ದೆಂದು ಹೇಳಿಕೊಳ್ಳುತ್ತಿರುವುದು ಬಿಟ್ಟರೆ ಬೇರೇನನ್ನೂ ಬಿಜೆಪಿ ಸರ್ಕಾರ ಮಾಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸಂಸದರು ಭಾವನಾತ್ಮಕ ವಿಚಾರವನ್ನು ಮಾತ್ರ ಮಾತನಾಡುತ್ತಿದ್ದಾರೆ. ಅವರಿಗೆ ಯಾರೂ ಸತ್ತರೂ ಪರವಾಗಿಲ್ಲ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರ ಪಡೆಯುವುದೇ ಬಿಜೆಪಿಯ ಕೆಲಸ ಎಂದ ಅವರು, ಬಡವರಿಗೆ, ದುರ್ಬಲರಿಗೆ ಸಹಾಯವಾಗಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಕಾಂಗ್ರೆಸ್ ಸರ್ಕಾರದ ಎಲ್ಲಾ ಗ್ಯಾರಂಟಿಗಳು ಜನರ ಕೈಗೆ ಮುಟ್ಟಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ ಕೀರ್ತಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಬ್ಲಾಕ್ ಯುವಕ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.