Ullal: ಮಲಗಿದ್ದಲ್ಲೇ ಹೃದಯಾಘಾತಕ್ಕೆ ಯುವಕ ಮೃತ್ಯು
Tuesday, April 23, 2024
ಉಳ್ಳಾಲ: ಕೊಲ್ಯದ ಮಳಯಾಲ ಕೋಡಿ ದೈವಸ್ಥಾನದ ವಲಸರಿ ಜಾತ್ರೆ ನೋಡಿ ಮಲಗಿದ್ದ ನವ ವಿವಾಹಿತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕೊಲ್ಯ ಕನೀರುತೋಟದಲ್ಲಿ ಮಂಗಳವಾರ ಸಂಭವಿಸಿದೆ.
ಕೊಲ್ಯ ಕನೀರುತೋಟ ನಿವಾಸಿ ಜಿತೇಶ್ (28)ಯಾನೆ ಜೀತು ಸಾವನ್ನಪ್ಪಿದ ಯುವಕ. ಜಿತೇಶ್ ಅವರು ನಿನ್ನೆ ಅತ್ತೆ ಮನೆಯಲ್ಲಿ ಪತ್ನಿಯ ಹುಟ್ಟು ದಿನವನ್ನ ಆಚರಿಸಿದ್ದರು. ರಾತ್ರಿ ಕೊಲ್ಯದ ಮಳಯಾಲ ಕೋಡಿ ದೈವಸ್ಥಾನದ ವಲಸರಿ ಜಾತ್ರೆ ನೋಡಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದ ಜಿತೇಶ್ ಇಂದು ಬೆಳಗ್ಗೆ ಎದ್ದಿಲ್ಲ. ಮನೆಮಂದಿ ಪರಿಶೀಲಿಸಿದಾಗ ಜಿತೇಶ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಬೈಕ್ ಶೋರೂಮಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ಪ್ರೇಮಿಸಿ ವಿವಾಹವಾಗಿದ್ದರು. ಮೃತ ಜಿತೇಶ್ ತಂದೆ, ತಾಯಿ, ಪತ್ನಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.