Kaapu: ಮೇ.4 ರಂದು ಕಾಪು ಪಿಲಿ ಕೋಲ
ಕಾಪು: ತುಳುನಾಡಿನ ಏಳು ವಿಶಿಷ್ಟ ಜಾನಪದ ಆಚರಣೆಗಳಲ್ಲಿ ಒಂದಾಗಿರುವ ಹಾಗೂ ಭೂತರಾದನೆಯಲ್ಲಿ ವಿಶೇಷ ಎನಿಸಿರುವ ಪಿಲಿಕೋಲ (ಹುಲಿಕೋಲ) ಮೇ.೪ ರಂದು ಕಾಪುವಿನಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ 1 ಗಂಟೆಗೆ ಕಾಪು ಹಳೆ ಮಾರಿಯಮ್ಮ ದೇವಸ್ಥಾನದ ಸಮೀಪದ ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದ ಸಂಪ್ರದಾಯ ಬದ್ಧವಾಗಿ ಪಿಲಿಕೋಲ ನಡೆಯಲಿದೆ ಅನಾದಿ ಕಾಲದಿಂದಲೂ ವಾಡಿಕೆಯಂತೆ ಎರಡು ವರ್ಷಗಳಿಗೊಮ್ಮೆ ವಿಜ್ರಂಭಣೆಯಿಂದ ಕಾಪು ಪಿಲಿಕೋಲ ನಡೆಯುತ್ತಿದ್ದು ಈ ವಿಶಿಷ್ಟ ಆಚರಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಾತ್ರವಲ್ಲವೇ ದೇಶ ವಿದೇಶಗಳಿಂದ ಸಾವಿರಾರು ತುಳುವರು ಬರುತ್ತಾರೆ. ವಿಶೇಷವೆಂದರೆ ವಿದೇಶಿಗರು ಅಧ್ಯಯನಕ್ಕಾಗಿ ಬರುತ್ತಾರೆ. ವೈವಿದ್ಯಮಯ ಪಿಲಿಕೋಲ ಜನಾಕರ್ಷಣೆಯ ಕೇಂದ್ರವಾಗಿದೆ.
ಪರಶುರಾಮ ಸೃಷ್ಟಿಯ ತುಳು ನಾಡು ದೈವಾರಾದನೆಯ ನೆಲವಾಗಿದ್ದು ಇಲ್ಲಿ ದೇವರಿಗಿಂತ ದೈವಗಳಿಗೆ ಮಹತ್ವ ಜಾಸ್ತಿ. ಹುಲಿ ದೈವದ ಚಾಕಿರಿ ಮಾಡುವ ಜನಾಂಗ ಹುಲಿ ಕೋಲಕ್ಕೆ ಮಾರಿಗುಡಿಯಲ್ಲಿ ದೇವಿಯ ಎದುರು ಆವೇಶ ಬರುವ ಕ್ರಮ ಇದೆ. ಇಲ್ಲಿ ನಿಗದಿಯಾದ ನಂತರದಲ್ಲಿ ಅವರು ಶುಚಿರ್ಭೂತರಾಗಿ ವೃತಾಚರಣೆಯಲ್ಲಿರುತ್ತಾರೆ.
ಪಿಲಿಚಂಡಿ ಸ್ಥಾನದ ಹತ್ತಿರದ ಬಂದು ಒಳಗೆ ಕೆರೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸುವ ಸಂಪ್ರದಾಯವಿದೆ ಸ್ನಾನ ಮಾಡುತ್ತಿರಬೇಕಾದರೆ ಆವೇಶ ಬಂದ ವ್ಯಕ್ತಿಯನ್ನು ಕರೆದುಕೊಂಡು ಬಂದು ಒಲಿಮಡಲಿನಿಂದ ತಯಾರಿಸಿದ ಪಂಜರದೊಳಗೆ ಹಾಕುತ್ತಾರೆ. ಅಲ್ಲಿ ಅವರಿಗೆ ಮೈಗೆ ಬಣ್ಣ ಬಳಿದು ಮುಖವರ್ಣಿಕೆ ಬಿಡಿಸಿ ಹುಲಿಯ ರೂಪ ಕೊಡುತ್ತಾರೆ.
ಮಧ್ಯಾಹ್ನ ಒಂದು ಗಂಟೆ ನಂತರ ಪಿಲಿಚಂಡಿ ಮನೆಯವರು ಬಂದು ವೇಷಧಾರಿಯನ್ನು ಹೊರಕ್ಕೆ ಕರೆಯುವ ಸಂಪ್ರದಾಯ. ಆವೇಶಭರಿತ ಹುಲಿವೇಷ ಹಾರಿ ಒಲಿಪಂಜರದಿಂದ ಹೊರಕ್ಕೆ ಬರುವ ದ್ರಶ್ಯ ಮೈ ಜುಮ್ಮೆನಿಸುತ್ತದೆ. ಒಮ್ಮೆ ಹುಲಿ ವೇಷಧಾರಿ ಹೊರಗೆ ಬಂದರೆ ಅದನ್ನು ವೀಕ್ಷಿಸಲು ನೆರೆದ ಜನಸ್ತೋಮ ಚದುರಿ ಹೋಗುತ್ತದೆ. ಹುಲಿ ವೇಷಧಾರಿ ಅಲ್ಲಿಂದ ಬೇಟೆಗೆ ಹೊರಟು ಮಾರಿಗುಡಿಯ ಎದುರು ಬಂಟಕಂಬವನ್ನು ಬೀಳಿಸಿ ಅದರಲ್ಲಿದ್ದ ಕೋಳಿಯನ್ನು ಹಸಿಯಾಗಿ ಚಪ್ಪರಿಸಿ ಬೇಟೆಗೆ ಹೊರಡುತ್ತದೆ. ಸಮುದ್ರ ತೀರದವರೆಗೆ ಓಡಾಟ ನಡೆಸಿ ಬೇಟೆ ಅರಸುತ್ತಾ ಓಡಾಡಿಕೊಂಡಿರುವಾಗ ಹಗ್ಗ ಹಿಡಿದ ಇಬ್ಬರು ನಿಯಂತ್ರಿಸುವ ಮೂಲಕ ಪಿಲಿ ಕೋಲ ಸಾಯಂಕಾಲ ಸಂಪನ್ನ ಗೊಳ್ಳುತ್ತದೆ.

