Mangalore: ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗ ದಂತೆ ಅಗತ್ಯ ಕ್ರಮವಹಿಸಿ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು ನೀರಿನ ಅನಗತ್ಯ ಬಳಕೆಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ ಈ ಕಾರಣ ನೀರನ್ನು ಅನಗತ್ಯವಾಗಿ ಪೊಲು ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದರು.
ಮಳೆಯ ಕೊರತೆ, ತಾಪಮಾನ ಹೆಚ್ಚಳದಿಂದಾಗಿ ನೀರಿನ ಸಮಸ್ಯೆ ಪ್ರಾರಂಭವಾಗುತ್ತಿದೆ. ಸಾರ್ವಜನಿಕರು ಅನಗತ್ಯವಾಗಿ ನೀರು ಪೊಲು ಮಾಡದೇ ಸದ್ಭಳಕೆ ಮಾಡಬೇಕು ಹಾಗೂ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಈಗಾಗಲೇ ನೀರಿನ ಸಮಸ್ಯೆ ಪರಿಹರಿಸುವ ಕಂಟ್ರೋಲ್ ರೂಮ್ ಗಳನ್ನು ತೆರೆಯಲಾಗಿದ್ದು, ಈ ಕಂಟ್ರೋಲ್ ರೂಮ್ ಗಳಿಗೆ ಸಾರ್ವಜನಿಕರಿಂದ ಬರುವಂತಹ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು, ನೀರಿನ ರೇಷನಿಂಗ್ ಮಾಡಲು ಸೂಕ್ತ ವೇಳಾಪಟ್ಟಿಯನ್ನು ತಯಾರಿಸಿ ಸಮರ್ಪಕವಾಗಿ ಎಲ್ಲಾ ಕಡೆ ನೀರು ಪೂರೈಕೆಯಾಗುವಂತೆ ನಿಗಾವಹಿಸಬೇಕು ಎಂದು ಮಹಾನಗರಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.
ಜಿಲ್ಲೆಯ ಪ್ರತಿ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಕಾರ್ಯನಿರ್ವಹಕ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ಅನ್ನು ರಚಿಸಿ ನೀರಿನ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಡ್ಯಾಮ್ ಗಳನ್ನು ಹೊರತುಪಡಿಸಿ ನೀರಿನ ಪರ್ಯಾಯ ಮೂಲಗಳನ್ನು ಖುದ್ದಾಗಿ ಭೇಟಿ ನೀಡಿ ಅದರ ಬಗ್ಗೆ ಪಟ್ಟಿ ತಯಾರಿಸಬೇಕು ಎಂದರು.
ನೀರಿನ ಸಮಸ್ಯೆ ಇರುವ ಸೋಮೇಶ್ವರ ಹಾಗೂ ಕೋಟೆಕಾರು ಪ್ರದೇಶಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಆಗುತ್ತಿದ್ದು, ಅದರ ಬಗ್ಗೆಯೂ ಗಮನಹರಿಸಬೇಕು. ಮುಂದಿನ ಮಳೆಗಾಲದವರೆಗೂ ಯಾವುದೇ ರೀತಿಯ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು ಎಂದರು.