
Ujire: ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷ
Wednesday, May 8, 2024
ಉಜಿರೆ: ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕದ ಚಾರ್ಮಾಡಿ ಘಾಟಿಯಲ್ಲಿ ಬುಧವಾರ ಬೆಳಗ್ಗೆ ಮತ್ತೆ ಒಂಟಿ ಸಲಗ ಕಂಡುಬಂದಿದೆ.
ಘಾಟಿ ರಸ್ತೆಯ ಎರಡನೇ ತಿರುವಿನ ಬಳಿ ಕಾಡಾನೆ ತಿರುಗಾಟ ನಡೆಸಿದ್ದ ಕಾರಣ ಕೆಲ ಕಾಲ ವಾಹನಗಳು ಸಾಲಾಗಿ ನಿಲ್ಲಬೇಕಾಯಿತು. ಆನೆ ಸಂಚಾರ ಕಂಡ ಕೆಲವು ವಾಹನ ಸವಾರರು ಭಯಭೀತರಾದ ಘಟನೆಯೂ ನಡೆಯಿತು.
ಸ್ಥಳಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್‌ಎಫ್‌ಒ ಮೋಹನ್ ಕುಮಾರ್, ಡಿಆರ್‌ಎಫ್‌ಒ ನಾಗೇಶ್, ರವಿ ಅವರ ತಂಡ ಭೇಟಿ ನೀಡಿ ಸ್ಥಳೀಯರ ಸಹಕಾರದಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿ, ಆನೆಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಿತು. ಕಳೆದ ಎರಡು ತಿಂಗಳಲ್ಲಿ ಘಾಟಿ ವಿಭಾಗದಲ್ಲಿ ಹಗಲು ಹೊತ್ತು ಕಾಡಾನೆ ಕಂಡು ಬಂದಿ ರುವುದು ಇದು ಮೂರನೇ ಸಲವಾಗಿದೆ. ಪ್ರಸ್ತುತ ನೀರಿನ ಆಶ್ರಯ ಹುಡುಕಿಕೊಂಡು ಕಾಡಾನೆ ಸಹಿತ ಅನೇಕ ವನ್ಯಜೀವಿಗಳು ತೊಂದರೆ ಅನುಭವಿಸುತ್ತಿದ್ದು ನೀರು ಹಾಗೂ ಆಹಾರವನ್ನು ಅರಸಿ ಅತ್ತಿತ್ತ ಅಲೆದಾಟ ನಡೆಸುತ್ತಿವೆ.
ತಾಲೂಕಿನ ಅಲ್ಲಲ್ಲಿ ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗುತ್ತಿದ್ದು, ಕೃಷಿ ಹಾನಿ ಮುಂದುವರೆಸಿದ ಘಟನೆಗಳು ವರದಿಯಾಗುತ್ತಿವೆ.