
Bantwal: ಗೂಗಲ್ ಮ್ಯಾಪ್ ಅವಾಂತರ-ತಿರುವಿನಲ್ಲಿ ಸಿಲುಕಿದ ಕಂಟೈನರ್
ಬಂಟ್ವಾಳ: ಬೃಹತ್ ಕಂಟೈನರ್ ಲಾರಿಯೊಂದು ಅಲ್ಲಿಪಾದೆ ಸಮೀಪದ ಅಣೇಜ ತಿರುವಿನಲ್ಲಿ ಸಿಲುಕಿ ಹಾಕಿಕೊಂಡ ಘಟನೆ ಇಂದು ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿ ಚಾಲಕ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರಿಂದ ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳಲು ಗೂಗಲ್ ಮ್ಯಾಪ್ ಹಾಕಿದ್ದಾರೆ.
ಈ ಸಂದರ್ಭ ಅವರಿಗೆ ಉಪ್ಪಿನಂಗಡಿಯಿಂದ ಅಜಿಲಮೊಗರು ಮಣಿಹಳ್ಳ ರಸ್ತೆಯ ಮೂಲಕ ಸಾಗಿ, ಮಂಗಳೂರಿಗೆ ತೆರಳಲು ಮ್ಯಾಪ್ ಸೂಚಿಸಿದೆ. ಅದರಂತೆ ಸಾಗಿದ ಪರಿಣಾಮ ಈ ಅವಾಂತರ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಸಿ ರೋಡು-ಅಡ್ಡಹೊಳೆ ನಡುವೆ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಹೊಸದಾಗಿ ಈ ರಸ್ತೆಯಲ್ಲಿ ಸಂಚರಿಸುವ ಚಾಲಕರಿಗೆ ಹೈರಾಣಾಗುತ್ತಿದೆ. ಅವರು ಪರ್ಯಾಯ ರಸ್ತೆಯ ಹುಡುಕಾಟ ಮಾಡುವಾಗ ಗೂಗಲ್ ಮ್ಯಾಪ್ ಈ ರಸ್ತೆಯನ್ನು ಸೂಚಿಸುತ್ತಿದೆ. ಆದರೆ ಈ ರಸ್ತೆಯು ಘನವಾಹನ ಸಾಗಾಟಕ್ಕೆ ಸೂಕ್ತವಾಗಿಲ್ಲ.
ಅಣೇಜದಲ್ಲಿ ಅಪಾಯಕಾರಿ ತಿರುವು ಇರುವುದರಿಂದ ಒಂದೇ ಬಾರಿಗೆ ವಾಹನ ತಿರುವು ಪಡೆದು ಕೊಳ್ಳುವುದಿಲ್ಲ. ಎರಡು ಮೂರು ಬಾರಿ ಹಿಂದೆ ಮುಂದೆ ಚಲಿಸಿ ತಿರುಗಿಸಬೇಕಿದೆ. ಅದರಂತೆ ಬೃಹತ್ ಲಾರಿಯು ಮುಂದೆ ಹೋಗಿದ್ದು ಆದರೆ ಹಿಂದೆ ಬರಲು ಸಾಧ್ಯವಾಗಿಲ್ಲ. ತಿರುವಿನಲ್ಲೇ ಸಿಲುಕಿಕೊಂಡಿದೆ. ಹೀಗಾಗಿ ಸರಪಾಡಿ ಬಿ.ಸಿ.ರೋಡು ಸಂಚರಿಸುವ ಬಸ್ ಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಿದ್ದು, ಸರಪಾಡಿ ಮಣಿನಾಲ್ಕೂರು ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಯಿತು. ಸಂಜೆಯ ವೇಳೆಗೆ ಲಾರಿಯನ್ನು ತೆರವುಗೊಳಿಸಲಾಗಿದೆ.