.jpeg)
Mangalore: ನೇತ್ರಾವತಿ ರಿವರ್ ಫ್ರಂಟ್ ಕಳಪೆ ಕಾಮಗಾರಿಗೆ ಮೇಯರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು
ಮಂಗಳೂರು: ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ನೇತ್ರಾವತಿ ರಿವರ್ ಫ್ರಂಟ್ (ಜಲಾಭಿಮುಖ ಯೋಜನೆ)ನಡಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿತಗೊಂಡಿದ್ದು, ಕಳಪೆ ಕಾಮಗಾರಿ ನಡೆದಿದ್ದು, ಇದರಲ್ಲಿ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರಾದ ಜಯಪ್ರಕಾಶ್ ಶೆಟ್ಟಿ ಆರೋಪಿಸಿದರು.
ಜೂ.೨೮ ರಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ರಿವರ್ ಫ್ರಂಟ್ ಯೋಜನೆಯಲ್ಲಿ ಸಿಆರ್ ಝೆಡ್ ಕಾನೂನು ಉಲ್ಲಂಘನೆಯಾಗಿರುವುದು ಮಾತ್ರವಲ್ಲದೆ, ಮೊದಲ ಮಳೆಗೆ ತಡೆಗೋಡೆ ಕುಸಿತವಾಗಿದೆ. ಜನರ ತೆರಿಗೆ ದುಡ್ಡಿನ ಕೋಟ್ಯಂತರ ರೂ.ಗಳನ್ನು ಪೋಲು ಮಾಡಲಾಗುತ್ತಿದೆ. ಇಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನವಿದ್ದು, ಈ ಯೋಜನೆ ಯಾಕೆ ನಿಲ್ಲಿಸಬಾರದು ಎಂದು ಜಯಪ್ರಕಾಶ್ ಪ್ರಶ್ನಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ದೊರಕಿರುವುದೇ ಈ ನೇತ್ರಾವತಿ ಜಲಾಭಿಮುಖ ಯೋಜನೆಯಿಂದ. ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಬೋಳಾರದವರೆಗಿನ ೨.೧ ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಡಿಪಿಆರ್ ಅನುಮೋದನೆ ದೊರಕಿ ಕಾಮಗಾರಿ ನಡೆದಿದೆ. ಇತ್ತೀಚೆಗೆ ತಡೆಗೋಡೆ ಕುಸಿತವಾಗಿ ಕಳಪೆ ಕಾಮಗಾರಿ ಕುರಿತಂತೆ ಸ್ಮಾರ್ಟ್ ಸಿಟಿಯ ಬೋರ್ಡ್ ಸಭೆಯಲ್ಲಿ ಗಮನಕ್ಕೆ ತರಲಾಗಿದೆ. ಎನ್‌ಜಿಟಿ ತಂಡ ಈಗಾಗಲೇ ಅಲ್ಲಿ ಭೇಟಿ ನೀಡಿ ಪರಿಸರಕ್ಕೆ ಧಕ್ಕೆ ತರುವ ವಿಚಾರ ಸಂಗ್ರಹಿಸುವಂತೆ ತಿಳಿಸಿದೆ. ಸದ್ಯ ಎನ್‌ಜಿಟಿ ಕಾಮಗಾರಿಗೆ ತಡೆ ನೀಡಿದೆ. ಕುಸಿತಗೊಂಡ ತಡೆಗೋಡೆಯನ್ನು ಗುತ್ತಿಗೆದಾರರು ಮರು ನಿರ್ಮಾಣ ಮಾಡಲಿದ್ದಾರೆ. ಅವರಿಗೆ ಹಣ ನೀಡದಂತೆ ಸೂಚಿಸಲಾಗಿದೆ ಎಂದು ಮೇಯರ್ ಉತ್ತರಿಸಿದರು.
ಈ ಸಂದರ್ಭ ಜಯಪ್ರಕಾಶ್, ಈ ರೀತಿ ಕಳಪೆ ಕಾಮಗಾರಿ ಆಗುವಾಗ ನೀವು ಯಾರೂ ನೋಡುವುದಿಲ್ಲವೇ ಎಂದು ಪ್ರಶ್ನಿಸಿದರು. ಅದು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಿಂದ ನಡೆಯುತ್ತಿರುವ ಕಾಮಗಾರಿ ಪಾಲಿಕೆಯಿಂದ ಯಾವುದೇ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಬೇಕು. ಆ ಕಾಮಗಾರಿಯ ಪರಿಶೀಲನೆ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಚೇರ್ಮೆನ್‌ರಿಂದ ಆಗಬೇಕು ಎಂದರು.
ಸುರತ್ಕಲ್‌ನ ಗೋವಿಂದದಾಸ್ ಕಾಲೇಜು ಹಿಂಬದಿಯ ರಸ್ತೆ ಹದಗೆಟ್ಟಿದೆ. ಒಂದೇ ಮಳೆಗೆ ರಸ್ತೆಯ ತೇಪೆ ಕಾರ್ಯ ಅರ್ದಂಬರ್ಧ ಕಿತ್ತು ಹೋಗಿದೆ. ಸ್ಥಳೀಯ ಮನಪಾ ಸದಸ್ಯರ ಗಮನಕ್ಕೆ ತರಲಾಗಿದ್ದರೂ ಸ್ಪಂದನ ದೊರಕಿಲ್ಲ. ನಾನೂ ಬಿಜೆಪಿ ಕಾರ್ಯಕರ್ತ ಆಗಿರುವುದರಿಂದ ನಿಮ್ಮಲ್ಲಿ ಹೇಳುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಾವು ಬರಬೇಕಲ್ವ ಎಂದು ಮೇಯರ್‌ಗೆ ಸ್ಥಳೀಯರೊಬ್ಬರು ಅಹವಾಲು ಸಲ್ಲಿಸಿದರು.
ಕುಲಶೇಖರ, ನಿಡ್ಡೇಲ್ ಬಳಿ ರಸ್ತೆಯ ಬದಿಯನ್ನೇ ಅಲ್ಲಿ ರೈಲ್ವೇ ಕಾಮಗಾರಿ ನಡೆಸುವ ಕಾರ್ಮಿಕರು ಬಯಲು ಶೌಚಾಲಯವಾಗಿಸಿದ್ದಾರೆ. ಅಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಕ್ರಮವಿಲ್ಲ ಎಂದು ಇಗ್ನೇಶಿಯಸ್ ಡಿಸೋಜ ಎಂಬವರು ಬೇಸರ ವ್ಯಕ್ತಪಡಿಸಿದರು. ಕೆಪಿಟಿಯಿಂದ ಯೆಯ್ಯಾಡಿವರೆಗಿನ ರಸ್ತೆಯಲ್ಲಿ ಅಕ್ರಮ ಅಂಗಡಿಗಳಿಂದ ಜನರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಶಾಂತಿ ಎಂಬವರು ದೂರಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಅಮೀನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.