Mangalore: ಭಾರತದ ಭವಿಷ್ಯಕ್ಕೆ ಕೋಮುವಾದ ಬಹಳ ಅಪಾಯ: ಬಿ.ಕೆ ಇಮ್ತಿಯಾಜ್

Mangalore: ಭಾರತದ ಭವಿಷ್ಯಕ್ಕೆ ಕೋಮುವಾದ ಬಹಳ ಅಪಾಯ: ಬಿ.ಕೆ ಇಮ್ತಿಯಾಜ್


ಮಂಗಳೂರು: ಪ್ರಸಕ್ತ ಸನ್ನಿವೇಶದಲ್ಲಿ ಕೋಮುವಾದವೆಂಬ ವಿಷ ದೇಶದುದ್ದಗಲಕೂ ಆವರಿಸಿ ವಿಷಮ ಪರಿಸ್ಥಿತಿಯನ್ನು ನಿರ್ಮಿಸಿದೆ. ಕೇಂದ್ರದ ಬಿಜೆಪಿ ಸರಕಾರ ಇಂದು ಫ್ಯಾಸಿಸ್ಟ್ ಮಾದರಿಯಲ್ಲಿ ದೇಶವನ್ನಾಳುತ್ತಿದೆ. ಸಮಾಜದಲ್ಲಾಗುವ ಅನ್ಯಾಯ ದಬ್ಬಾಳಿಕೆಗಳ ವಿರುದ್ಧ, ಬಿಜೆಪಿ ಸರಕಾರದ ಕೋಮು ರಾಜಕಾರಣದ ಆಡಳಿತ ನೀತಿಯ ವಿರುದ್ದ ಧ್ವನಿ ಎತ್ತಿದರೆ ಅಂತಹ ಧ್ವನಿಯನ್ನು ಹಿಂಸೆಯ ಮೂಲಕ ಹತ್ತಿಕ್ಕುವ ಅಥವಾ ದೇಶದ್ರೋಹದ ಪ್ರಕರಣ ದಾಖಲಿಸಿ ಹೋರಾಟವನ್ನು ಕುಗ್ಗಿಸುವ ದಮನಕಾರಿ, ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಹೇಳಿದರು.

ಅವರು ಹುತಾತ್ಮ ಸಂಗಾತಿ ಶ್ರೀನಿವಾಸ್ ಬಜಾಲ್ ಅವರ 22ನೇ ವರುಷದ ಹುತಾತ್ಮ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಬಜಾಲ್ ಪರಿಸರದಲ್ಲಿ ನಡೆದ ಸಾಮರಸ್ಯ ಸಭೆ ಮತ್ತು ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಯ ಆಡಳಿತದವಧಿಯಲ್ಲಿ ಸಾರ್ವಜನಿಕ ರಂಗದ ಸೊತ್ತುಗಳನ್ನೆಲ್ಲಾ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದು ಜನವಿರೋಧಿ ನೀತಿಗಳನ್ನೇ ಜಾರಿಗೊಳಿಸಿದೆ ಇಂತಹ ನೀತಿಗಳಿಂದಾಗಿ ಇಂದು ಜನ ಸಾಮಾನ್ಯರ ಬದುಕು ಬೀದಿಪಾಲಾಗಿದೆ. ಬಿಜೆಪಿ ಸಂಘಪರಿವಾರ ಪ್ರತಿಪಾಧಿಸುತ್ತಿರುವ ಕೋಮು ದ್ವೇಷವುಳ್ಳ ರಾಜಕಾರಣವು ಭಾರತದ ಭವಿಷ್ಯಯನ್ನು ಅಪಾಯದ ಪರಿಸ್ಥಿತಿಗೆ ತಂದೊಡ್ಡಿದೆ ಎಂದರು.

ಕೋಮು ರಾಜಕಾರಣದ ಸಮೂಹ ಸನ್ನಿಗೊಳಗಾಗಿದ್ದ ಜನ ಇಂದು ಅರ್ಥೈಸ ತೊಡಗಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಅದಕ್ಕೊಂದು ಉದಾಹರಣೆ. ದ್ವೇಷ ರಾಜಕಾರಣವನ್ನೇ ಮುಂದಿಟ್ಟು ಆಡಳಿತ ನಡೆಸಿದ ಬಿಜೆಪಿಗೆ ಈ ಬಾರಿ ಹಿನ್ನಡೆಯಾಗಿದೆ. ಕಾರಣ ಇಷ್ಟೇ ವಿದ್ಯಾರ್ಥಿ ಯುವಜನರು ನಿರುದ್ಯೋಗದಿಂದ ಬೇಸತ್ತಿದ್ದಾರೆ. ರೈತರು, ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಬೀದಿ ಹೋರಾಟ ನಡೆಸುವಂತಾಗಿದೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳು ದಬ್ಬಾಳಿಕೆಗೊಳಪಟ್ಟು ಬೀದಿ ಹೆಣವಾಗುವಂತಾಗಿದೆ. ಜನ ಇಂದು ತಮ್ಮ ಸಿನಿಕತನದಿಂದ ಹೊರಬಂದು ನೈಜ ಬದುಕಿನ ಪ್ರಶ್ನೆಗಳಾದ ಉದ್ಯೋಗ, ಆರೋಗ್ಯ, ಶಿಕ್ಷಣದ ಹಕ್ಕುಗಳಿಗಾಗಿ ಬೀದಿ ಹೋರಾಟ ನಡೆಸುವಂತಾಗಿದೆ. ಇಂತಹ ನೈಜ್ಯ ಬದುಕಿನ ಪ್ರಶ್ನೆಗಳಿಗಾಗಿಯೇ ಶ್ರೀನಿವಾಸ್ ಬಜಾಲ್ ಆಗಲಿ ಡಿವೈಎಫ್‌ಐ ಆಗಲಿ ತನ್ನ ಪ್ರಾರಂಭದ ದಿನದಿಂದಲೇ ಹೋರಾಡುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಿವೈಎಫ್‌ಐನ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ದೇಶದಾದ್ಯಂತ ಆರ್.ಎಸ್.ಎಸ್ ನಡೆಸುವ ಕ್ರೌರ್ಯಕ್ಕೆ ಎದುರಾಗಿ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲು ನಡೆದ ಹೋರಾಟದಲ್ಲಿ ಹಲವಾರು ಡಿವೈಎಫ್‌ಐನ ಯುವ ಹೋರಾಟಗಾರರು ತನ್ನ ಪ್ರಾಣವನ್ನು ಮುಡಿಪಾಗಿಟ್ಟು ಹುತಾತ್ಮರಾಗಿರುತ್ತಾರೆ. ಇಂತಹ ಹೋರಾಟದ ಪಥದಲ್ಲಿ ಮುನ್ನಡೆದ ಬಜಾಲ್ ಪ್ರದೇಶದ ಡಿವೈಎಫ್‌ಐ ಮುಖಂಡ ಶ್ರೀನಿವಾಸ್ ಬಜಾಲ್ ಕೂಡ ಒಬ್ಬರು. ಸ್ಥಳೀಯ ಯುವಜನರನ್ನು ಕ್ರೀಡಾ, ಸಾಂಸ್ಕೃತಿಕ ಅಭಿರುಚಿ ಮೂಲಕ ಸಂಘಟಿಸಿ ಸಮಾಜದ ಅನ್ಯಾಯಗಳ ವಿರುದ್ಧ ತೊಡಗಿಸಿಕೊಳ್ಳಲು ಪ್ರೇರೇಪಿಸಿದವರು. ಸೌಹಾರ್ದ ಸಮಾಜಕ್ಕಾಗಿ ಅವರು ನಡೆಸಿದ ತ್ಯಾಗ, ಬಲಿದಾನ ಮತ್ತು ಆಶಯಗಳನ್ನು ಇಂದಿನ ಯುವ ಪೀಳಿಗೆ ಮಾದರಿಯಾಗಿಟ್ಟುಕೊಂಡು ಕೋಮುವಾದದ ವಿರುದ್ಧದ ಹೋರಾಟ ನಿರಂತರಗೊಳಿಸಿದ್ದಾರೆ. ಶ್ರೀನಿವಾಸರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶಯ ಕನಸುಗಳನ್ನು ಇಂದಿನ ಯುವತಲೆಮಾರು ಮುನ್ನಡೆಸುತ್ತಿದೆ ಎಂದರು.

ಸಭೆಯನ್ನು ಉದ್ದೇಶಿಸಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ಡಾ ಜೀವನ್ ರಾಜ್ ಕುತ್ತಾರ್ ಮಾತನಾಡಿದರು.

ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ಜಿಲ್ಲಾ ಮುಖಂಡ ನಿತಿನ್ ಕುತ್ತಾರ್, ಸ್ಥಳೀಯ ಮುಖಂಡರಾದ ನಾಗರಾಜ್ ಬಜಾಲ್, ಆನಂದ ಎನೆಲ್ಮಾರ್ ಉಪಸ್ಥಿತರಿದ್ದರು. ಡಿವೈಎಫ್‌ಐ ನಗರಾಧ್ಯಕ್ಷ ಜಗದೀಶ್ ಬಜಾಲ್ ಸ್ವಾಗತಿಸಿ, ದೀರಜ್ ಬಜಾಲ್ ವಂದಿಸಿದರು.

ಕಾರ್ಯಕ್ರಮದ ನೇತೃತ್ವವನ್ನು ಡಿವೈಎಫ್‌ಐ ಪಕ್ಕಲಡ್ಕ ಘಟಕದ ಮುಖಂಡರಾದ ಪ್ರಕಾಶ್ ಶೆಟ್ಟಿ, ಅಶೋಕ್ ಎನೆಲ್ ಮಾರ್, ಪ್ರೀತೇಶ್, ದೀಪಕ್ ಬಜಾಲ್, ವರಪ್ರಸಾದ್, ಕೀರ್ತನ್, ಪ್ರಥಮ್, ಲೋಕೆಶ್ ಎಮ್, ಅಶೋಕ್ ಸಾಲ್ಯಾನ್, ಸಿಂಚನ್ ಮತ್ತಿತರರು ವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಡಿವೈಎಫ್‌ಐನ ನೂರಾರೂ ಕಾರ್ಯಕರ್ತರು ರಕ್ತದಾನ ಮಾಡಿದರು. ಸಾರ್ವಜನಿಕ ಸಭೆಯಲ್ಲಿ ಬಜಾಲ್ ವಿಭಾಗ ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article