
Mangalore: ಟೋಲ್‌ಗೇಟ್ ವಿರೋದಿ ಹೋರಾಟ ಸಮಿತಿಯ ಸಭೆ
ಮಂಗಳೂರು: ಯಶಸ್ವಿ ಟೋಲ್ ತೆರವು ಹೋರಾಟದಲ್ಲಿ ಭಾಗಿಗಳಾದ 101 ಜನ ಹೋರಾಟಗಾರರಿಗೆ ಜಾಮೀನು ಕೊಡಿಸುವ, ಆಗಬೇಕಾದ ಸಿದ್ದತೆಗಳ ಕುರಿತು ಚರ್ಚಿಸಲು ಜೂ.30 ರಂದು ಕರೆಯಲಾದ ಹೋರಾಟ ಸಮಿತಿ ಸಭೆ ನಡೆಯಿತು.
ಮಾಜಿ ಸಚಿವ ಅಭಯ ಚಂದ್ರ ಜೈನ್, ಮಾಜಿ ಉಪಮೇಯರ್‌ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ, ದಯಾನಂದ ಶೆಟ್ಟಿ ಪ್ರಮುಖರಾದ ದಿಲ್‌ರಾಜ್ ಆಳ್ವ, ವಿ. ಕುಕ್ಯಾನ್, ಬಿ. ಶೇಖರ್, ವಸಂತ ಬೆರ್ನಾಡ್, ಮಂಜುಳಾ ನಾಯಕ್, ರಮೇಶ್ ಟಿ.ಎನ್., ರಾಘವೇಂದ್ರ ರಾವ್, ಶೇಖರ ಹೆಜಮಾಡಿ, ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಸಾಹುಲ್ ಹಮೀದ್ ಬಜ್ಪೆ, ಮೂಸಬ್ಬ ಪಕ್ಷಿಕೆರೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.
ಆರೋಪಪಟ್ಟಿಯಲ್ಲಿ ಹೆಸರಿರುವ 30ಕ್ಕೂ ಹೆಚ್ಚು ಹೋರಾಟಗಾರರು ನ್ಯಾಯವಾದಿ ಚರಣ್ ಶೆಟ್ಟಿ ಮಾರ್ಗದರ್ಶನದಲ್ಲಿ ವಕಾಲತ್ತು ಫಾರಂ ಸಹಿ ಹಾಕಿದರು. ಇನ್ನುಳಿದವರು ಮುಂದಿನ ಗುರುವಾರದೊಳಗಡೆ ಹೋರಾಟ ಸಮಿತಿಯ ಆಯಾಯ ಪ್ರದೇಶದ ಪ್ರಮುಖರ ಸಹಾಯ ಪಡೆದು ವಕಾಲತ್ತು ಫಾರಂ ಭರ್ತಿ ಮಾಡಬೇಕಾಗಿ ವಿನಂತಿಸಿಕೊಳ್ಳಲಾಯಿತು.
ಜು.6 ರಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯಬೇಕಿದ್ದು. ಅಂದು ಎಲ್ಲರೂ ಬೆಳಿಗ್ಗೆ 9.45 ರ ಒಳಗಡೆ ನ್ಯಾಯಾಲಯದಲ್ಲಿ ಹಾಜರಿದ್ದು ಸಹಕರಿಸಲು ಕೋರಲಾಗಿದೆ. ಅನಿವಾರ್ಯ ಆದವರು ಅಂದು ಬಂದು ವಕಾಲತ್ತು ಅರ್ಜಿಗೆ ಸಹಿ ಹಾಕಲು ಅವಕಾಶವಿದೆ. ಅಂತವರು ಬೆಳಿಗ್ಗೆ 9.30 ರ ಒಳಗಡೆ ನ್ಯಾಯಾಲಯದ ಆವರಣದಲ್ಲಿ ಹಾಜರಿರತಕ್ಕದ್ದು.
ಹೋರಾಟಗಾರರು ನ್ಯಾಯಾಯಕ್ಕೆ ಹಾಜರಾಗುವ ಜು.6 ರಂದು ಹೋರಾಟ ಸಮಿತಿಯ ಪ್ರಮುಖರು, ಸಹಭಾಗಿ ಸಂಘಟನೆಗಳ ಪದಾಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದು, ಮೊಕದ್ದಮೆ ಎದುರಿಸುತ್ತಿರುವ ಹೋರಾಟಗಾರರ ಜೊತೆಗೆ ಸೌಹಾರ್ದತೆ ಪ್ರಕಟಿಸಬೇಕಾಗಿ ಮನವಿ ಮಾಡಲಾಗಿದೆ.