
Mangalore: ಬೀಡಿ ಕಾರ್ಮಿಕರಿಗೆ ನೀಡಬೇಕಾದ ಹಣವನ್ನು ಗುತ್ತಿಗೆದಾರರ ಖಾತೆಗೆ ಜಮಾ ಮಾಡಿ ವಂಚಿಸಿದೆ
ಮಂಗಳೂರು: ಬೀಡಿ ಕಾರ್ಮಿಕರಿಗೆ ಈ ವರ್ಷದ ಎಪ್ರಿಲ್ 1ರಿಂದ ಮಾಲಕರು ಕೊಡಬೇಕಾಗಿದ್ದ 22.72 ರೂ. ತುಟ್ಟಿಭತ್ತೆಯಲ್ಲಿ ಸುಮಾರು 11.26 ಕಡಿತ ಮಾಡಿ ಸಾವಿರ ಬೀಡಿಗೆ ಕೇವಲ 11.46 ರೂ.ವನ್ನು ಕೆಲವು ಬೀಡಿ ಮಾಲಕರು ಗುತ್ತಿಗೆದಾರರ ಖಾತೆಗೆ ಜಮಾ ಮಾಡಿ ವಂಚಿಸಿದೆ ಎಂದು ಎಐಟಿಯುಸಿ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಗಳು ಆರೋಪಿಸಿದೆ.
ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ ಶೀಘ್ರ ಪಾವತಿಸುವಂತೆ ಆಗ್ರಹಿಸಿ ಮೇ.16 ರಿಂದ ಜಿಲ್ಲೆಯಾದ್ಯಂತ ವಿವಿಧ ಹಂತದ ಹೋರಾಟಗಳು ನಡೆದಿದೆ. ಅಲ್ಲದೇ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಸಂಧಾನ ಮಾತುಕತೆಗಳೂ ನಡೆದಿದೆ. ಜುಲೈ 10 ರಂದು ಮತ್ತೆ ಮಾತುಕತೆ ನಡೆಯಲಿದೆ. ಅದಾಗ್ಯೂ ಯಾವುದೇ ತೀರ್ಮಾನವಿಲ್ಲದೆ ಮಾಲಕರು ಕಾನೂನು ಪ್ರಕಾರ ಕೊಡಬೇಕಾದ ತುಟ್ಟಿಭತ್ತೆಯನ್ನು ವಂಚಿಸಿ, ಅನಧಿಕೃತ ಕಡಿತ ಮಾಡಿ ಬೀಡಿ ಗುತ್ತಿಗೆ ದಾರರ ಮೂಲಕ ಪಾವತಿಗೆ ಮುಂದಾಗಿರುವುದು ಖಂಡನೀಯ. ತುಟ್ಟಿಭತ್ತೆ ಪೂರ್ತಿ ಮೊತ್ತವನ್ನು ನೀಡದೆ ಅವೈಜ್ಞಾನಿಕ ವಾಗಿ 11.46 ರೂ.ವನ್ನು ಬೀಡಿ ಕಾರ್ಮಿಕರಿಗೆ ಪಾವತಿಸಲು ಹೊರಟಿರುವ ಮಾಲಕರ ನೀತಿಯನ್ನು ಈ ಎರಡೂ ಸಂಘಟನೆಗಳು ಖಂಡಿಸಿ ಪ್ರಬಲ ಪ್ರತಿರೋಧ ವ್ಯಕ್ತಪಡಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
22.72 ರೂ. ತುಟ್ಟಿಭತ್ತೆ ಜಾರಿಗೆ ಒತ್ತಾಯಿಸಿ ಜು.11ರಿಂದ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಕಾರ್ಮಿಕ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ)ನ ವಿ.ಎಸ್. ಬೇರಿಂಜ ಮತ್ತು ಸುರೇಶ್ ಕುಮಾರ್ ಬಂಟ್ವಾಳ ಹಾಗೂ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು)ನ ವಸಂತ ಆಚಾರಿ ಮತ್ತು ಬಾಲಕೃಷ್ಣ ಶೆಟ್ಟಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.