
Uppinangadi: ಉಪ್ಪಿನಂಗಡಿಯಲ್ಲಿ ಬೆಂಕಿ ಅವಘಡ-2 ಅಂಗಡಿ ಸಂಪೂರ್ಣ ನಾಶ
ಉಪ್ಪಿನಂಗಡಿ: ಉಪ್ಪಿನಂಗಡಿಯ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಎರಡು ಅಂಗಡಿಗಳು ಸಂಪೂರ್ಣ ಸುಟ್ಟುಹೋಗಿದ್ದು, ಪಕ್ಕದ ಅಂಗಡಿಗಳಿಗೂ ಹಾನಿ ಉಂಟಾಗಿದೆ. ಇದರಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಲಾಂ ಮೈನಾ ಮಾಲಕತ್ವದ ಫ್ಯಾನ್ಸಿ ಅಂಗಡಿ ಹಾಗೂ ಶುಕೂರು ಮಾಲಕತ್ವದ ಮೊಬೈಲ್ ಅಂಗಡಿಗಳ ಈ ಘಟನೆಯಲ್ಲಿ ಸಂಪೂರ್ಣ ಸುಟ್ಟುಹೋಗಿವೆ. ಅದರ ಪಕ್ಕದಲ್ಲಿದ್ದ ಅಯ್ಯಂಗಾರ್ ಬೇಕರಿಗೂ ಬೆಂಕಿ ಆವರಿಸಿ ಅಪಾರ ನಷ್ಟ ಉಂಟು ಮಾಡಿದೆ. ಬೇಕರಿಯ ಶಟರ್, ಗೋಡೆ, ಸಿಸಿ ಕ್ಯಾಮರಾ ಸಿಸ್ಟಮ್, ವಿದ್ಯುತ್ ಸಂಪರ್ಕ, ಆಂತರಿಕ ವಿನ್ಯಾಸ, ಫರ್ನಿಚರ್‌ಗಳಿಗೆ ಹಾನಿ ಉಂಟಾಗಿದೆ. ಮಾರಾಟಕ್ಕೆ ಸಿದ್ಧಗೊಳಿಸಿಟ್ಟ ಲಕ್ಷಾಂತರ ರೂಪಾಯಿ ಮೌಲ್ಯದ ತಿಂಡಿ ತಿನಸುಗಳು ಬೆಂಕಿಯಿಂದ ನಾಶವಾಗಿದೆ.
ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿ ಇಡೀ ವಾಣಿಜ್ಯ ಮಳಿಗೆಯನ್ನೇ ಆವರಿಸುವ ಭೀತಿ ಮೂಡಿದಾಗ ಸ್ಥಳೀಯ ಪಂಚಾಯತ್ ಸದಸ್ಯ ತೌಷಿಪ್ ಯು ಟಿ, ಸನ್ಮಾನ್ ಅಮ್ಮಿ, ಫಾರೂಕ್ ಕೆಂಪಿ, ಸಚಿನ್ ಎ.ಎಸ್., ಫಯಾಜ್ ಯು.ಟಿ., ನಾಗೇಶ್ ಪ್ರಭು, ಅಸ್ವಫ್ ಕೆಂಪಿ, ಶೇಖರ್ ನೆಕ್ಕಿಲಾಡಿ, ಹಸೈನಾರ್, ಪೂವಪ್ಪಗೌಡ, ಸಾದಿಕ್, ಇಸ್ಮಾಯಿಲ್ ತಂಗಳ್, ಅಚಲ್ ಉಬರಡ್ಕ, ಮೊಯಿನ್ ನಟ್ಟಿಬೈಲ್, ಹರೀಶ್ ಭಂಡಾರಿ, ಇಬ್ರಾಹಿಂ ಆಚಿ, ರವಿ ಅಯ್ಯಂಗಾರ್, ಶಬೀರ್ ಕೆಂಪಿ ನೇತೃತ್ವದ ಉಬಾರ್ ಡೋನರ್ಸ್ ತಂಡದ ಯುವಕರು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.
ಬ್ಯಾಂಕ್‌ಗಳು, ಸಹಕಾರಿ ಸಂಘ ಸಂಸ್ಥೆಗಳು ಸೇರಿದಂತೆ ಇನ್ನೂರಕ್ಕೂ ಮಿಕ್ಕಿದ ಅಂಗಡಿ ಮುಂಗಟ್ಟುಗಳನ್ನು ಹೊಂದಿರುವ ಪೃಥ್ವಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡ ಸೇರಿದಂತೆ ಈವರೆಗೆ ಮೂರು ಅಗ್ನಿ ಅನಾಹುತಗಳು ಸಂಭವಿಸಿದ್ದು, ಶುಕ್ರವಾರ ರಾತ್ರಿ ಜನ ಸಂಚಾರ ಇದ್ದ ವೇಳೆ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ ಜನತೆ ಸಕಾಲಕ್ಕೆ ಧಾವಿಸಿ ಬಂದು ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಒಂದು ವೇಳೆ ತಡ ರಾತ್ರಿ ಈ ಅವಘಡ ಸಂಭವಿಸಿದ್ದರೆ, ಸನಿಹದ ಬ್ಯಾಂಕ್ ಆಫ್ ಬರೋಡಾ ದ ಶಾಖಾ ಕಚೇರಿಯೂ ಒಳಗೊಂಡಂತೆ ಹೆಚ್ಚಿನ ಕಚೇರಿಗಳು ಅಂಗಡಿ ಮುಂಗಟ್ಟುಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು. ಘಟನೆಗೆ ಸಂಬಂಧಿಸಿ ಶನಿವಾರ ನ್ಯೂ ಅಯ್ಯಂಗಾರ್ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.