.jpeg)
Mangalore: ಹೆದ್ದಾರಿ ಸಂಚಾರದಟ್ಟಣೆ-ತ್ವರಿತ ಪರಿಹಾರಕ್ಕೆ ಸ್ಪೀಕರ್ ಸೂಚನೆ
Sunday, July 14, 2024
ಮಂಗಳೂರು: ನಗರದ ನಂತೂರು, ಪಂಪ್‌ವೆಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಶನಿವಾರ ನಂತೂರು ವೃತ್ತದಲ್ಲಿ ದಿನವಿಡೀ ಸಂಚಾರದಟ್ಟಣೆ ಉಂಟಾಗಿ ನಗರದಲ್ಲಿ ಸಂಚಾರ ವ್ಯವಸ್ಥೆಗೆ ತೀವ್ರ ಅಡ್ಡಿಯಾಗಿ ಸ್ವತಃ ಸ್ಪೀಕರ್ ಅವರು ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರು. ಇದರಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿಗದಿಯಾಗಿದ್ದ ಡೆಂಗ್ಯೂ ಸಭೆಗೆ ಅವರು ಆಗಮಿಸುವಾಗ ಸಾಕಷ್ಟು ವಿಳಂಭವಾಯಿತು.
ಈ ಹಿನ್ನೆಲೆಯಲ್ಲಿ ಅವರು ಸಭೆಯ ಬಳಿಕ ಜಿಲ್ಲಾಧಿಕಾಯವರಿಗೆ, ನಂತೂರು ಮತ್ತು ಪಂಪ್‌ವೆಲ್ ವೃತ್ತದಲ್ಲಿ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ಕೂಡಲೇ ಮುಚ್ಚಲು ಕ್ರಮ ವಹಿಸಲು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಲು ನಿರ್ದೇಶಿಸಲು ಸ್ಪೀಕರ್ ಯು.ಟಿ. ಖಾದರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.