ಪ್ರಾಚೀನ ದಶಾವತಾರ ದ್ವಾರಬಂಧ ಪತ್ತೆ

ಪ್ರಾಚೀನ ದಶಾವತಾರ ದ್ವಾರಬಂಧ ಪತ್ತೆ


ಉಡುಪಿ ಜಿಲ್ಲೆ ಉಡುಪಿ ತಾಲೂಕಿನ ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ ವಿಜಯನಗರ ಕಾಲದ ದಶಾವತಾರ ಶಿಲ್ಪ ಪಟ್ಟಿಕೆಯ ದ್ವಾರಬಂಧ ಕಂಡು ಬಂದಿದೆ ಎಂದು ನಿವೃತ್ತ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ಆದಿಮ ಕಲಾ ಟ್ರಸ್ಟ್ (ರಿ.), ಉಡುಪಿ ಇದರ ಸ್ಥಾಪಕ ಸದಸ್ಯ ಪ್ರೊ. ಟಿ. ಮುರುಗೇಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಂಚಿನ ದ್ವಾರಬಂಧವು ಸುಮಾರು 4.5 ಅಡಿ ಎತ್ತರ ಮತ್ತು 3.5 ಅಡಿ ಅಗಲವಾಗಿದೆ. ಅಡ್ಡ ಪಟ್ಟಿಕೆಯ ಮೇಲೆ ಗಜಲಕ್ಷ್ಮಿಯ ಲಲಾಟ ಬಿಂಬವಿದೆ. ಎಡ-ಬಲದ ಲಂಭ ಪಟ್ಟಿಕೆಗಳ ಮೇಲೆ ಕ್ರಮವಾಗಿ ಅಂಜಲೀ ಮುದ್ರೆಯಲ್ಲಿ ನಿಂತಿರುವ ಆಂಜನೇಯ, ವ್ಯಾಳಿ, ವ್ಯಾಳಿಯ ಮುಖದಿಂದ ಹೊರಟ ಲತಾ ಕೋಷ್ಟಕಗಳ ಮಧ್ಯೆ ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಮತ್ತು ವಾಮನಾವತಾರದ ಶಿಲ್ಪಗಳಿವೆ. ಉನ್ನತ ಪೀಠದ ಮೇಲೆ ಕುಳಿತಿರುವ ಲಕ್ಷ್ಮಿಯ ಎಡ-ಬಲದಲ್ಲಿ ಆನೆಗಳು ಪವಿತ್ರ ಕಳಸಗಳಿಂದ ಅಭಿಷೇಕ ಮಾಡುತ್ತಿವೆ. ಆನೆಗಳ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ರೇಖಾ ವಿನ್ಯಾಸಗಳು ಅಡ್ಡ ಪಟ್ಟಿಕೆಯ ಮೇಲಿವೆ. ನಂತರ ಪರುಶುರಾಮ, ರಾಮ, ಕಾಳಿಂಗ ಮರ್ಧನ ಬೆಣ್ಣೆ ಕೃಷ್ಣ, ಬೆತ್ತಲೆ ಬುದ್ಧ, ಕಲ್ಕಿ ಮತ್ತು ಅಂಜಲೀ ಮುದ್ರೆಯಲ್ಲಿ ನಿಂತಿರುವ ಗರುಡನ ಶಿಲ್ಪಗಳಿವೆ.

ಚಾರಿತ್ರಿಕ ಮಹತ್ವ:

ಅನಂತಪದ್ಮನಾಭ ದೇವಾಲಯದ ಒಳ ಆವರಣದಲ್ಲಿ ವಿಜಯನಗರ ಸಾಮ್ರಾಜ್ಯದ ಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಕಾಲದ ಶಾಸನವಿದೆ. ಆ ಶಾಸನದಲ್ಲಿ ಚಕ್ರವರ್ತಿಯು, ದೇವಾಲಯದ ಅನಂತ ದೇವರಿಗೆ ನಿತ್ಯವೂ ನಡೆಯುವ ಅಮ್ರುತಪಡಿ, ನಂದಾದೀಪ, ಶ್ರೀಬಲಿ, ನೈವೇದ್ಯ ಮತ್ತು ಪಂಚಪರ್ವಗಳಿಗೆ ಅಪಾರ ಪ್ರಮಾಣದ ಭೂದಾನವನ್ನು ನೀಡುತ್ತಾನೆ ಹಾಗೂ ದೇವಾಲಯದ ಪಾರುಪತ್ಯವನ್ನು ನಡೆಸಲು ಸೂರಪ್ಪಯ್ಯ ಎಂಬ ಅಧಿಕಾರಿಯನ್ನು ನೇಮಿಸಿದ ಆದೇಶವನ್ನು ಶಾಸನ ಒಳಗೊಂಡಿದೆ. ಸಾಮಾಜ್ಯದ ಆರ್ಥಿಕಬಲದಿಂದ ಸೂರಪ್ಪಯ್ಯ ಅಧಿಕಾರಿ ಇಡೀ ದೇವಾಲಯವನ್ನು, ತೀರ್ಥಮಂಟಪವನ್ನು ಶಿಲಾಮಯವಾಗಿ ಜೀರ್ಣೋದ್ಧಾರ ಮಾಡುತ್ತಾನೆ. ಬಹುಶಃ ಅದೇ ಸಮಯದಲ್ಲಿ ದೇವಾಲಯದ ಗರ್ಭಗುಡಿಯ ಪ್ರವೇಶ ದ್ವಾರಕ್ಕೆ ಕಂಚಿನ ದಶಾವತಾರ ಶಿಲ್ಪಗಳ ಪಟ್ಟಿಕೆಯನ್ನೂ ಮಾಡಿಸಲಾಗಿದೆ.

ಕೃಷ್ಣದೇವರಾಯನು ಒರಿಸ್ಸಾದ ಗಜಪತಿಗಳ ಮೇಲೆ ದಾಳಿ ಮಾಡಿ, ತನ್ನ ಯಶಸ್ವೀ ದಾಳಿಯ ನೆನಪಿಗಾಗಿ ಒರಿಸ್ಸಾದಿಂದ ಬೆಣ್ಣೆಕೃಷ್ಣನ ಮೂರ್ತಿಯನ್ನು ರಾಜಧಾನಿಗೆ ತರುತ್ತಾನೆ. ಹಂಪಿಯಲ್ಲಿ ಕೃಷ್ಣನಿಗಾಗಿ ಭವ್ಯವಾದ ದೇಗುಲವನ್ನು ನಿರ್ಮಾಣ ಮಾಡುತ್ತಾನೆ. ತದ ನಂತರ ಬೆಣ್ಣೆ ಕೃಷ್ಣ ವಿಜಯನಗರ ಸಾಮ್ರಾಜ್ಯದಲ್ಲಿ ಜನಪ್ರಿಯ ದೇವತೆಯಾಗಿ ಕಾಣಿಸಿಕೊಳ್ಳುತ್ತಾನೆ. ಸದರಿ ದ್ವಾರಬಂಧದ ದಶಾವತಾರ ಶಿಲ್ಪಗಳಲ್ಲಿ ಬೆಣ್ಣೆಕೃಷ್ಣ ಎಂಟನೇ ಅವತಾರವಾಗಿ ಚಿತ್ರಿಸಲ್ಪಟ್ಟಿದ್ದಾನೆ. ಆದ್ದರಿಂದ ಈ ಕಂಚಿನ ದ್ವಾರಬಂಧ 16ನೇ ಶತಮಾನಕ್ಕೆ ಸೇರಿದ ವಿಜಯನಗರ ಕಾಲದ ಶಿಲ್ಪ ಕಲಾಕೃತಿ ಎಂದು ನಿರ್ಧರಿಸಬಹುದಾಗಿದೆ. ಒಂಭತ್ತೆನೇ ಅವತಾರವಾಗಿ ಕಂಡುಬರುವ ಬೆತ್ತಲೆಯಾಗಿ ನಿಂತಿರುವ ಬುದ್ಧನ ಶಿಲ್ಪ ಅತ್ಯಂತ ಕುತೂಹಲಕಾರಿಯಾದದ್ದು. ಇದೇ ರೀತಿಯ ಶಿಲ್ಪ ಶೃಂಗೇರಿಯ ವಿದ್ಯಾಶಂಕರ ದೇವಾಲಯದ ಭಿತ್ತಿಯಲ್ಲಿ ಕಂಡುಬರುತ್ತದೆ. ಕಂಚಿನ ದ್ವಾರಬಂಧದ ಶಿಲ್ಪಗಳು ಸಂಪೂರ್ಣವಾಗಿ ವಿಜಯನಗರ ಶೈಲಿಯಲ್ಲಿವೆ.

ಈ ಅಧ್ಯಯನಕ್ಕೆ ನೆರವಾದ ದೇವಾಲಯದ ಅನುವಂಶಿಕ ಮೊಕ್ತೇಸರರಾದ ಪ್ರಮೋದ್ ರೈ ಪಳಜೆ, ಆಡಳಿತಾಧಿಕಾರಿ ಗುರುರಾಜ್, ದೇವಾಲಯದ ಅರ್ಚಕ ವೃಂದ ಮತ್ತು ದೇವಾಲಯದ ಆಡಳಿತ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article