.jpeg)
Mangalore: ಭೂಮಿ ಅಗೆತ, ಕಟ್ಟಡ ನಿರ್ಮಾಣ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ: ಮೇಯರ್
ಮಂಗಳೂರು: ಮಳೆಗಾಲದಲ್ಲಿ ಸಂಭವಿಸುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್‌ವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂಮಿ ಅಗೆತ, ಕಟ್ಟಡ ನಿರ್ಮಾಣ ನಿಷೇಧ ಮಾಡಬೇಕೆಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ತಿಳಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಂಭಾವ್ಯ ಅನಾಹುತ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜೊತೆಯಲ್ಲೂ ಚರ್ಚಿಸಲಾಗಿದೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ತಡೆಗೋಡೆ ಶಿಥಿಲಗೊಂಡಿರುವ ಪ್ರದೇಶ ಮತ್ತು ತಡೆಗೋಡೆ ಅಗತ್ಯ ಇರುವ ಜಾಗಗಳನ್ನು ಗುರುತಿಸಿಲು ಮೂವರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಶಿಥಿಲಗೊಂಡಿರುವ ಸ್ಥಳಗಳನ್ನು ಕಿರಿಯ ಎಂಜಿನಿಯರ್‌ಗಳು ಪರಿಶೀಲಿಸಿ, ಮರಳು ಚೀಲಗಳನ್ನು ಇಟ್ಟು ತಾತ್ಕಾಲಿಕ ವ್ಯವಸ್ಥೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ. ಆ ಮೂಲಕ ಅಪಾಯದ ಸಂಭವನೀಯತೆ ತಡೆಯವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯ ಜಲಾಭಿಮುಖಿ ಯೋಜನೆಯಡಿ ನಿರ್ಮಿಸಿರುವ ತಡೆಗೋಡೆ ಒಂದು ಭಾಗದಲ್ಲಿ ಕುಸಿದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ (ಎನ್‌ಜಿಟಿ) ಪ್ರಕರಣ ಇರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಆಗಸ್ಟ್ 2ಕ್ಕೆ ವಿಚಾರಣೆ ಇದ್ದು, ತೀರ್ಪು ನಮ್ಮ ಪರ ಬರುವ ವಿಶ್ವಾವಿದೆ ಎಂದು ಸುಧೀರ್ ಶೆಟ್ಟಿ ಹೇಳಿದರು.