Udupi: ಹಾಸ್ಟೆಲ್ ಪ್ರವೇಶಾತಿ ವಿಳಂಬ ನೀತಿ ವಿರುದ್ಧ ಆಕ್ರೋಶ

Udupi: ಹಾಸ್ಟೆಲ್ ಪ್ರವೇಶಾತಿ ವಿಳಂಬ ನೀತಿ ವಿರುದ್ಧ ಆಕ್ರೋಶ


ಉಡುಪಿ: ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನ ನೀಡದ ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ, ರಾಜ್ಯಾದ್ಯಂತ ಗ್ರಾಮೀಣ ಭಾಗಗಳಿಂದ ನಗರಕ್ಕೆ ಬಂದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಲಕ್ಷ ಸಂಖ್ಯೆಯಲ್ಲಿದೆ. ಉಡುಪಿಯಂಥ ನಗರಕ್ಕೆ ಶಿಕ್ಷಣಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಂದ ಬರುತ್ತಾರೆ. ಈಗಾಗಲೇ ಹೈಸ್ಕೂಲ್ ಮತ್ತು ಪಿಯುಸಿ ತರಗತಿಗಳು ಪ್ರಾರಂಭವಾಗಿ 40 ದಿನಗಳಾದರೂ ಇನ್ನೂ ಹಾಸ್ಟೆಲ್ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಮತ್ತು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಮತ್ತೊಂದೆಡೆ ವಿದ್ಯಾಸಿರಿ, ಕಾರ್ಮಿಕರ ನಿಧಿ ವಿದ್ಯಾರ್ಥಿ ವೇತನವೂ ಬಿಡುಗಡೆಯಾಗುತ್ತಿಲ್ಲ, ರೈತನಿಧಿ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವುದು ಖಂಡನೀಯ ಎಂದರು.

ತಾಲೂಕು ಸಂಚಾಲಕ ಅಜಿತ್ ಜೋಗಿ ಮಾತನಾಡಿ, 100 ವಿದ್ಯಾರ್ಥಿಗಳು ಹಾಸ್ಟೆಲ್‌ಗಾಗಿ ನೋಂದಾಯಿಸಿದರೆ ಕೇವಲ 40 ಮಂದಿಗೆ ಮಾತ್ರ ವಸತಿ ವ್ಯವಸ್ಥೆ ಆಗುತ್ತಿದೆ. ಇನ್ನು ಉಳಿದ 60 ವಿದ್ಯಾರ್ಥಿಗಳು ಬೀದಿಗಳಲ್ಲಿ ಮಲಗಬೇಕೇ ಎಂದು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ಉತ್ತರಿಸಬೇಕು ಎಂದರು.

ಪ್ರತಿಭಟನೆಯಲ್ಲಿ ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ಜಿಲ್ಲಾ ಸಂಚಾಲಕ ಕಾರ್ತಿಕ್ ಎಮ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ, ನಗರ ಸಹಕಾರ್ಯದರ್ಶಿ ಭಾವನಾ, ಪ್ರಮುಖರಾದ ಭೂಷಣ್, ಮನು, ಮಾಣಿಕ್ಯ, ಸ್ವಸ್ತಿಕ್, ನವೀನ್, ಅನಂತಕೃಷ್ಣ ಮೊದಲಾದವರಿದ್ದರು.

ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪ್ರಮುಖ ಬೇಡಿಕೆಗಳು:

ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ ಪ್ರವೇಶಾತಿ ನೀಡಬೇಕು. ರಾಜ್ಯದಲ್ಲಿ ಸಮಾಜ ಕಲ್ಯಾಣ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಇಲಾಖೆಗಳ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಿಸಬೇಕು. ಬಾಕಿ ಉಳಿದಿರುವ ಹಿಂದಿನ ವರ್ಷದ ವಿದ್ಯಾರ್ಥಿ ವೇತನವನ್ನು ತಕ್ಷಣ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article