
Udupi: ಮತಾಂಧ ಶಕ್ತಿಗಳ ಓಲೈಕೆಗಾಗಿ ಶಾಸಕರ ವಿರುದ್ಧ ಪ್ರಕರಣ ದಾಖಲು: ಶಾಸಕ ಯಶ್‌ಪಾಲ್ ಸುವರ್ಣ
ಉಡುಪಿ: ಲೋಕಸಭೆಯಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ರಾಹುಲ್ ಗಾಂಧಿ ಹೇಳಿಕೆಯನ್ನು ಪ್ರತಿಭಟನೆಯಲ್ಲಿ ಖಂಡಿಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವಿರುದ್ಧ ಕೇಸು ದಾಖಲಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕೇಸ್ ದಾಖಲಿಸಲು ಮೀನಮೇಷ ಎಣಿಸಿದ ರಾಜ್ಯ ಸರಕಾರ, ಹಿಂದೂ ವಿರೋಧಿ ರಾಹುಲ್ ಗಾಂಧಿ ಅವರಿಗೆ ತಕ್ಕ ಉತ್ತರ ನೀಡಿದ ಭರತ್ ಶೆಟ್ಟಿ ವಿರುದ್ಧ ಕೇಸ್ ದಾಖಲಿಸುವ ಮೂಲಕ ಮತಾಂಧ ಶಕ್ತಿಗಳ ಓಲೈಕೆಗೆ ಮುಂದಾಗಿದೆ.
ಹಿಂದುತ್ವ, ರಾಷ್ಟ್ರೀಯತೆ ವಿಚಾರದಲ್ಲಿ ಎಂದಿಗೂ ರಾಜೀಯಾಗದ ಕರಾವಳಿ ಭಾಗದ ಬಿಜೆಪಿ ಶಾಸಕರನ್ನು ದಮನಿಸುವ ಯತ್ನವನ್ನು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ನಡೆಸುತ್ತಿದ್ದು, ಈಗಾಗಲೇ ಶಾಸಕರಾದ ಹರೀಶ್ ಪೂಂಜ ಮತ್ತು ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸುವ ಮೂಲಕ ನೈತಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸುತ್ತಿದೆ.
ಕಾಂಗ್ರೆಸ್ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ರಾಜ್ಯ ಪೊಲೀಸ್ ಇಲಾಖೆ, ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ. ಪೊಲೀಸ್ ಇಲಾಖೆ ಮೂಲಕ ಕೇಸು ದಾಖಲಿಸುವ ಮೂಲಕ ಶಾಸಕರನ್ನು ನಿಯಂತ್ರಿಸುವ ವಿಫಲ ಪ್ರಯತ್ನ ಮಾಡುತ್ತಿದ್ದು ಸಮಸ್ತ ಜನತೆ ರಾಹುಲ್ ಗಾಂಧಿಯ ಹಿಂದೂ ವಿರೋಧಿ ನಿಲುವನ್ನು ಖಂಡಿಸಿದ ಭರತ್ ಶೆಟ್ಟಿ ಜೊತೆ ನಿಲ್ಲಲಿದ್ದು ಕಾಂಗ್ರೆಸ್ ಸರಕಾರದ ಒತ್ತಡದ ತಂತ್ರಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಯಶಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.