
Ujire: ಜು.16 ರಿಂದ ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ವಾಚನ-ಪ್ರವಚನ
ಉಜಿರೆ: ಧರ್ಮಸ್ಥಳದಲ್ಲಿ ನಾಳೆ ಮಂಗಳವಾರದಿಂದ ಎರಡು ತಿಂಗಳ ಕಾಲ ‘ಜೈಮಿನಿ ಭಾರತ’ ಮತ್ತು ‘ತುರಂಗ ಭಾರತ’ದ ಬಗ್ಗೆ 53ನೇ ವರ್ಷದ ಪುರಾಣ ವಾಚನ-ಪ್ರವಚನ ನಡೆಯಲಿದೆ. ಶನಿವಾರ ಮತ್ತು ಭಾನುವಾರ ವಿವಿಧ ಕಾವ್ಯಗಳ ಆಯ್ದ ಭಾಗವನ್ನು ಪುರಾಣವಾಚನಕ್ಕೆ ಬಳಸಲಾಗುವುದು.
ಮಂಗಳವಾರ ಸಂಜೆ ಗಂಟೆ 5.30ಕ್ಕೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಹಿರಿಯ ವಿದ್ವಾಂಸರಾದ ಮಂಗಳೂರಿನ ಪ್ರೊ. ಎಂ. ಪ್ರಭಾಕರ ಜೋಶಿ ಉದ್ಘಾಟಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸುವರು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡುವರು.
ಮುಂದೆ ಸೆಪ್ಟೆಂಬರ್ 17ರ ವರೆಗೆ ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ಗಂಟೆ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ ಎಂದು ಪುರಾಣ ವಾಚನ-ಪ್ರವಚನ ಸಮಿತಿಯ ಸಂಚಾಲಕ ಎ.ವಿ. ಶೆಟ್ಟಿ ತಿಳಿಸಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಜೈಮಿನಿ ಭಾರತದ ಪೀಠಿಕಾ ಸಂಧಿ ಮತ್ತು ಎರಡನೇ ಸಂಧಿಯನ್ನು ಕಾವ್ಯಶ್ರೀ ಅಜೇರು ವಾಚನ ಮಾಡಿದರೆ, ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರವಚನ ನೀಡುವರು.