
Ujire: ಅಮೇರಿಕಾದಲ್ಲಿ ಚಂದ್ರಶೇಖರ ಧರ್ಮಸ್ಥಳ 75 ದಿನಗಳ ಯಕ್ಷಯಾನ
Tuesday, July 9, 2024
ಉಜಿರೆ: ಯಕ್ಷಧ್ರುವ ಪಟ್ಲ ಫೌಂಡೇಷನ್ ನೇತೃತ್ವದಲ್ಲಿ ಅಮೇರಿಕಾದ 20 ರಾಜ್ಯಗಳಲ್ಲಿ ನಡೆಯುವ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಕ್ಕಾಗ್ಗಿ 75 ದಿನಗಳ ಯಕ್ಷಯಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಹಿರಿಯ ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರು ಜು.9 ರಂದು ಬೆಂಗಳೂರಿಗೆ ತೆರಳಿ ಅಲ್ಲಿಂದ ವಿಮಾನ ಮೂಲಕ ಅಮೆರಿಕಕ್ಕೆ ಪಟ್ಲ ಸತೀಶ್ ಶೆಟ್ಟಿ ಅವರ 9 ಮಂದಿ ಕಲಾವಿದರೊಂದಿಗೆ ತೆರಳಿದರು.
ಜು.13 ರಿಂದ ಸೆ.22 ರವರೆಗೆ ಅಮೇರಿಕಾದ ಪ್ರಮುಖ ಕೇಂದ್ರಗಳಲ್ಲಿ ಪೌರಾಣಿಕ ಪ್ರಸಂಗದ ಯಕ್ಷಗಾನ ಕಲೆಯ ಕಂಪನ್ನು ಪಸರಿಸಲಿದ್ದಾರೆ. ವಿದೇಶಿ ನೆಲದಲ್ಲಿ ಕರಾವಳಿ ಕರ್ನಾಟಕದ ಗಂಡುಮೆಟ್ಟಿನ ಯಕ್ಷಗಾನ ಕಲೆಯನ್ನು ಪ್ರದರ್ಶಿಸಿ ಅಲ್ಲಿಯ ಕಲಾಭಿಮಾನಿಗಳ ಮನಸೂರೆಗೊಳ್ಳಲಿದ್ದಾರೆ. 9 ಮಂದಿಯ ಯಕ್ಷಯಾನ ತಂಡದಲ್ಲಿ ಹಿಮ್ಮೇಳದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಕಲಾವಿದರಾದ ಪ್ರೊ. ಎಂ.ಎಲ್. ಸಾಮಗ, ಹರಿನಾರಾಯಣ ಭಟ್ ಎಡನೀರು, ಮಹೇಶ್ ಮಣಿಯಾಣಿ, ಚಂದ್ರಶೇಖರ ಧರ್ಮಸ್ಥಳ, ಪ್ರಶಾಂತ್ ನೆಲ್ಯಾಡಿ ಮತ್ತು ಮೋಹನ್ ಬೆಳ್ಳಿಪ್ಪಾಡಿ ಅವರು ಪ್ರದರ್ಶನ ನೀಡಲು ತೆರಳಿದ್ದಾರೆ.