ಗೌರವ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ಭ್ರಷ್ಟಾಚಾರ ಮುಕ್ತ ಹಾಗೂ ಸ್ವಚ್ಛ ಇಮೇಜ್ ಉಳ್ಳ ವ್ಯಕ್ತಿಯೆಂದು ತನ್ನ ಬಗ್ಗೆ ತಾನೇ ಸರ್ಟಿಫಿಕೇಟ್ ಕೊಡುತ್ತಾ ಬಂದಿರುವ ಸಿದ್ದರಾಮಯ್ಯ ಅವರಿಗೆ ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ಜನಾದೇಶದ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ದಕ ಸಂಸದ ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ತನ್ನ ಆಧೀನದಲ್ಲಿ ಇರುವ ಸಂಸ್ಥೆಯಿಂದಲೇ ತನಿಖೆ ಎದುರಿಸುವ ಸಂದರ್ಭ ನಿಷ್ಪಕ್ಷಪಾತವಾದ ತನಿಖೆ ನಿರೀಕ್ಷೆ ಅಸಾಧ್ಯ. ಆದ್ದರಿಂದ ಸಿದ್ದರಾಮಯ್ಯ ಅವರು ತಾನು ನಿರ್ದೋಷಿ ಎಂದು ಸಾಬೀತು ಆಗುವ ತನಕ ಮುಖ್ಯಮಂತ್ರಿ ಸ್ಥಾನ ತ್ಯಜಿಸ ಬೇಕು ಎಂದು ಆಗ್ರಹಿಸಿದರು.
ರಾಮಕೃಷ್ಣ ಹೆಗಡೆಯವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಮೇಲೆ ಗಂಭೀರ ಆರೋಪ ಕೇಳಿಬಂದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಜನಾದೇಶ ಪಡೆದು ಮುಖ್ಯಮಂತ್ರಿಯಾಗಿದ್ದರು ಎಂದು ಅವರು ನೆನಪಿಸಿದರು.
ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿ ಮುಡಾ ಮತ್ತು ವಾಲ್ಮೀಕಿ ಹಗರಣಗಳ ಬಗ್ಗೆ ಮುಖ್ಯಮಂತ್ರಿಯವರು ಒಂದು ಕ್ಲಾರಿಟಿ ನೀಡಬೇಕಿತ್ತು. ಆದರೆ ಸದನದಲ್ಲಿ ಪ್ರತಿಪಕ್ಷವನ್ನು ಎದುರಿಸುವ ಇಲ್ಲದೆ ಓಡಿಹೋಗಿದ್ದಾರೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಆರೋಪಿಸಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಬಿಜೆಪಿ ಮುಖಂಡರಾದ ಮಾಜಿ ಸಚಿವ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಅವರ ವಿರುದ್ಧ ಇರುವ ಆರೋಪಗಳ ಕುರಿತು ತನಿಖೆ ನಡೆಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಬಿಜೆಪಿ ಯವರನ್ನು ಬ್ಲ್ಯಾಕ್‌ಮೇಲ್ ನಡೆಸುತ್ತಿದ್ದಾರೆ. ಕಳೆದ 15 ತಿಂಗಳಿಂದ ಅವರದೇ ಸರಕಾರವಿತ್ತು. ಯಾಕೆ ತನಿಖೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.
ಸೋಮೋಟೊಗೆ ಆಗ್ರಹ..:
ರಾಜ್ಯಪಾಲರನ್ನು ಕೇಂದ್ರ ವಾಪಾಸ್ ಕರೆಸಿಕೊಳ್ಳದಿದ್ದರೆ ಬಾಂಗ್ಲಾದೇಶ ಮಾದರಿ ಪ್ರತಿಭಟನೆಯ ಎಚ್ಚರಿಕೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೀಡಿದ್ದಾರೆ. ಅವರ ವಿರುದ್ಧ ಸೋಮೋಟೊ ಪ್ರಕರಣ ದಾಖಲಿಸುವಂತೆ ಸಂಸದ ಬ್ರಿಜೇಶ್ ಚೌಟ ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ಮಂಗಳೂರು ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಪ್ರತಿಭಟನೆ ಸಂದರ್ಭ ಪ್ರಚೋದನಕಾರಿ ಭಾಷಣ ಮೂಲಕ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ಮುಖಂಡರು ಪ್ರಚೋದಿಸಿದ್ದಾರೆ. ಇದರ ಪರಿಣಾಮ ಪ್ರಯಾಣಿಕರಿದ್ದ ಬಸ್‌ಗೆ ಕಲ್ಲೆಸೆಯಲಾಗಿದೆ ಎಂದು ಆರೋಪಿಸಿದರು.
ಮುಖಂಡರಾದ ನಿತಿನ್ ಕುಮಾರ್, ಯತೀಶ್, ಸಂಜಯ ಪ್ರಭು, ವಸಂತ ಪೂಜಾರಿ ಉಪಸ್ಥಿತರಿದ್ದರು.