ತೋಟಾಬೆಂಗ್ರೆಯ ಸಮುದ್ರ ಕಿನಾರೆಯಲ್ಲಿ ನಡೆದ ಕೊಲೆ ಆರೋಪಿ ಸೆರೆ
Thursday, September 26, 2024
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಟಾಬೆಂಗ್ರೆಯ ಸಮುದ್ರ ಕಿನಾರೆಯಲ್ಲಿ ನಡೆದ ಮುತ್ತು ಬಸವರಾಜ ವದ್ಧರ್ ಯಾನೆ ಮುದುಕಪ್ಪ ನವರ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತೋಟ ಬೆಂಗ್ರೆಯ ಧರ್ಮರಾಜ್ ಸುವರ್ಣ(50) ಬಂಧಿತ ಆರೋಪಿ. ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಚೂಂಪಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿ ಪಣಂಬೂರು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿಸಿದ್ದಾರೆ.
ಸೆ.21 ರಂದು ಈ ಕೊಲೆ ನಡೆದಿತ್ತು. ಬಂಧಿತ ಆರೋಪಿ ಧರ್ಮರಾಜ್ ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದು, ತೋಟಾ ಬೆಂಗ್ರೆಯಲ್ಲಿ ವಾಸಮಾಡಿಕೊಂಡಿದ್ದ. ಆರೋಪಿ ಧರ್ಮರಾಜ್ ಸುವರ್ಣ ಮತ್ತು ಮೃತ ಮುತ್ತು ಬಸವರಾಜ ವಡ್ಡರ್ ಯಾನೆ ಮುದುಕಪ್ಪ ಕಳೆದ ಕೆಲವು ಸಮಯದಿಂದ ಒಬ್ಬರಿಗೊಬ್ಬರು ಪರಿಚಯದವರಾಗಿದ್ದು, ಇತ್ತೀಚೆಗೆ ಆರೋಪಿಯ ಧರ್ಮರಾಜ್ ಸುವರ್ಣ ಹೊಸ ಮೊಬೈಲ್ ಖರೀದಿಸಿದ್ದು, ಆ ಮೊಬೈಲ್‌ನ್ನು ಮೃತ ಮುತ್ತು ಬಸವಾರಾಜ್ ತೆಗೆದುಕೊಂಡು ವಾಪಾಸ್ ನೀಡದೆ ಮೊಬೈಲ್ ಹಾಳು ಮಾಡಿದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಈ ಸಂದರ್ಭ ಆರೋಪಿ ಧರ್ಮರಾಜ್ ಮುತ್ತು ಬಸವರಾಜ ವಡ್ಡರ್‌ನನ್ನು ಮರದ ಸೋಂಟೆಯಿಂದ ಹೊಡೆದು ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದ.