ವಿಧಾನ ಪರಿಷತ್ ಉಪ ಚುನಾವಣೆ: ಕಾಂಗ್ರೆಸ್‌ನಿಂದ ಉಡುಪಿ ಜಿಲ್ಲೆಯ ಅಭ್ಯರ್ಥಿ
ಮಂಗಳೂರು: ಸ್ಥಳೀಯಾಡಳಿತ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಉಡುಪಿ ಜಿಲ್ಲೆಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಉಡುಪಿ ಜಿಲ್ಲೆಯ ಅಭ್ಯರ್ಥಿ ಯನ್ನು ಕಾಂಗ್ರೆಸ್ ಕಣಕ್ಕಿಳಿಸಲಿದೆ. ಈ ಪೈಕಿ ಉಡುಪಿಯ ಮಾಜಿ ಜಿಪಂ ಅಧ್ಯಕ್ಷರಾದ ರಾಜು ಪೂಜಾರಿ ಮತ್ತು ಭುಜಂಗ ಶೆಟ್ಟಿ ಹಾಗೂ ಪಕ್ಷದ ಮುಖಂಡ ಕಾರ್ಕಳದ ಟಿ.ಆರ್. ರಾಜು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಅವರೊಂದಿಗೆ ಇನ್ನೂ ಮೂವರ ಹೆಸರು ಹೈಕಮಾಂಡ್ನ ಮುಂದಿದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದರು.
ಉಭಯ ಜಿಲ್ಲೆಗಳ ಸ್ಥಳೀಯಾಡಳಿತ ಚುನಾಯಿತ ಪ್ರತಿನಿಧಿಗಳ ಪೈಕಿ ಕಾಂಗ್ರೆಸ್ಗಿಂತ ಬಿಜೆಪಿಗ ಮತದಾರರ ಸಂಖ್ಯೆ ಅಧಿಕವಿದೆ. ಹಾಗಂತ ಈ ಕ್ಷೇತ್ರವನ್ನು ಸುಲಭದಲ್ಲಿ ಬಿಟ್ಟುಕೊಡುವ ಪ್ರಶ್ನೆಯಿಲ್ಲ. ಗೆಲ್ಲುವ ಅವಕಾಶವನ್ನೂ ಕೈಚೆಲ್ಲುವುದಿಲ್ಲ. ಈಗಾಗಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಚುನಾವಣಾ ತಂತ್ರಗಾರಿಕೆ ನಡೆಸಲಾಗಿದೆ. ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಪ್ರಬಲ ಅಭ್ಯರ್ಥಿಯ ಆಯ್ಕೆಗೆ ಅವರು ಸೂಚನೆ ನೀಡಿದ್ದಾರೆ. ಅದರಂತೆ ಕೆಪಿಸಿಸಿಯ ಇನ್ನೋರ್ವ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಈ ವಾರ ಜಿಲ್ಲೆಗೆ ಅಗಮಿಸಲಿದ್ದಾರೆ. ಈ ಹಿಂದಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳು, ಕಾಂಗ್ರೆಸ್ ಶಾಸಕರು, ಮುಖಂಡರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದರು.
ಬಿಜೆಪಿಗೆ ನೈತಿಕ ಹಕ್ಕಿಲ್ಲ..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲು ಬಿಜೆಪಿಗರಿಗೆ ನೈತಿಕ ಹಕ್ಕಿಲ್ಲ. 2010ರಲ್ಲಿ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್ಗೆ ಸಂಬಂಧಿಸಿದಂತೆ ಆಗಿನ ರಾಜ್ಯಪಾಲರು ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿದ್ದರು. 2011ರಲ್ಲಿ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿತ್ತು. ಆವಾಗ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆಯೇ? ಹೀಗಿರುವಾಗ ಬಿಜೆಪಿಗರು ಯಾವ ಆಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಳೆದ 10 ವರ್ಷದಲ್ಲಿ ಬಿಜೆಪಿಯು ದೇಶಾದ್ಯಂತ 443 ಶಾಸಕರನ್ನು ಖರೀದಿಸಿದೆ. ಈ ಪೈಕಿ 200ರಷ್ಟು ಶಾಸಕರು ಕಾಂಗ್ರೆಸ್ಸಿಗರೇ ಆಗಿದ್ದಾರೆ. ಮಹಾರಾಷ್ಟ್ರದ ಹಾಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಎನ್ಸಿಪಿಯಲ್ಲಿದ್ದಾಗ 70 ಸಾವಿರ ಕೋ.ರೂ.ಭ್ರಷ್ಟಾಚಾರದ ಆರೋಪವನ್ನು ಅವರ ಮೇಲೆ ಬಿಜೆಪಿ ಹೊರಿಸಿತ್ತು. ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿ ಕೊಂಡ ತಕ್ಷಣ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದಾರೆ. ಕೇಶವ ಕೃಪಾದ ಅಜೆಂಡಾದಂತೆ ಆಡಳಿತ ನಡೆಸುವ ಬಿಜೆಪಿಯು ಆಡಳಿತ ದುರುಪಯೋಗ ಮಾಡುತ್ತಿರುವುದಕ್ಕೆ ಇವೆಲ್ಲಾ ಸಾಕ್ಷಿಯಾಗಿದೆ ಎಂದು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪದ್ಮರಾಜ ಆರ್., ಶಾಲೆಟ್ ಪಿಂಟೋ, ಸುಹಾನ್ ಆಳ್ವ, ಟಿ.ಕೆ. ಸುಧೀರ್, ಜಾಕಿಂ ಡಿಸೋಜ, ಲಾರೆನ್ಸ್ ಡಿಸೋಜ, ಶುಭೋದಯ ಆಳ್ವ, ಸುಭಾಶ್ಚಂದ್ರ ಕೊಳ್ನಾಡಿ, ಮನೋಜ್, ನಝೀರ್ ಬಜಾಲ್ ಉಪಸ್ಥಿತರಿದ್ದರು.