ಮಹಿಷ ದಸರಾ ಧಾರ್ಮಿಕ ಭಾವನೆಗೆ ಧಕ್ಕೆಯಾಗದಿರಲಿ: ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್
Sunday, September 29, 2024
ಉಡುಪಿ: ಚಾಮುಂಡಿ ಬೆಟ್ಟ ಧಾರ್ಮಿಕ ಪ್ರದೇಶ. ಅದು ತಾಯಿ ಚಾಮುಂಡೇಶ್ವರಿಯ ಆಸ್ತಿ. ನಾವು ಆ ತಾಯಿಯನ್ನು ಮಹಿಷಾಸುರಮರ್ದಿನಿ ಎಂದು ನಂಬುತ್ತೇವೆ. ಮಹಿಷನ ಸಂಹಾರ ಮಾಡಿದಾಕೆ ಚಾಮುಂಡೇಶ್ವರಿ. ಈ ಭಾವನೆಗೆ ಧಕ್ಕೆಯಾಗಬಾರದು ಎಂದು ಮೈಸೂರು ಸಂಸದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಕರ್ಯಕ್ರಮವೊಂದರಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ್ದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಮಹಿಷ ದಸರಾ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತೆ ಆಚರಣೆ ಮಾಡಬಹುದು. ಅದನ್ನು ಅನುಸರಿಸಿದರೆ ನಮಗೆ ಸಂತೋಷ. ಸಂವಿಧಾನದಲ್ಲಿ ಯಾವುದೇ ನಂಬಿಕೆಗಳನ್ನು ಇಟ್ಟುಕೊಳ್ಳಲು ಅವಕಾಶವಿದ್ದು, ಮನೆಯಲ್ಲಿ ಯಾವುದೇ ಆಚರಣೆ ಮಾಡಬಹುದು. ಸಾರ್ವಜನಿಕ ಸ್ಥಳಗಳಲ್ಲೂ ಸರ್ಕಾರದಿಂದ ಅನುಮತಿ ಪಡೆದು ಮಾಡಿಕೊಳ್ಳಬಹುದು ಎಂದು ಪ್ರತಿಕ್ರಿಯಿಸಿದರು.
ರಾಜೀನಾಮೆ ನೀಡಲಿ:
ಮುಡಾ ಪ್ರಕರಣ, ವಾಲ್ಮೀಕಿ ಹಗರಣ ಬಗ್ಗೆ ಬಹಳಷ್ಟು ಚರ್ಚೆ ನಡೆದು, ಈಗಾಗಲೇ ಎಫ್ಐಆರ್ ದಾಖಲಾಗಿದೆ. ಮುಖ್ಯಮಂತ್ರಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಸಿಎಂ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ತನಿಖೆಯಲ್ಲಿ ಏನು ವರದಿ ಬರುತ್ತದೆ ಎಂದು ಕಾದು, ನಂತರ ಮುಂದುವರಿಯಲಿ ಎಂದು ಸಂಸದ ಯದುವೀರ್ ಸಲಹೆ ನೀಡಿದರು.