ಆಪತ್ಪಾಂಧವ ಈಶ್ವರ್ ಮಲ್ಪೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ: ಯಶಪಾಲ್ ಸುವರ್ಣ
ಉಡುಪಿ: ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗು ತೊರೆದು ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿಯೂ ರಕ್ಷಣೆಗೆ ಧಾವಿಸುವ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಈ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶೀರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಲಾರಿಯನ್ನು ಗುರುತಿಸುವಲ್ಲಿಯೂ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದರು. ಕಾರ್ಯಾಚರಣೆಯ ಕೊನೆಯ ಹಂತದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಈಶ್ವರ್ ಮಲ್ಪೆ ಅವರನ್ನು ಅವಮಾನಿಸಿ ಕಾರ್ಯಾಚರಣೆಗೆ ಅವಕಾಶ ನೀಡದಿರುವುದು ದುರದೃಷ್ಟಕರ.
ರಾಜ್ಯದಾದ್ಯಂತ ಎಲ್ಲೇ ಕರೆ ಬಂದರೂ ಪ್ರತಿಫಲಾಪೇಕ್ಷೆ ಇಲ್ಲದೆ ರಕ್ಷಣಾ ಕಾರ್ಯದಲ್ಲಿ ತೊಡುಗುವ ಈಶ್ವರ್ ಮಲ್ಪೆ ಸೇವೆಯನ್ನು ಎಲ್ಲರೂ ಗೌರವಿಸಬೇಕಿದೆ. ಅವರು ತನ್ನ ಕೌಟುಂಬಿಕ ಸಮಸ್ಯೆಗಳ ನಡುವೆಯೂ ಸಾವಿರಾರು ಮೃತ ದೇಹಗಳನ್ನು ಕಠಿಣ ಸಂದರ್ಭದಲ್ಲಿ ಪತ್ತೆಹಚ್ಚಿ ಸಂಬಂಧಿಕರಿಗೆ ಹಸ್ತಾಂತರಿಸಿ, ಹಲವಾರು ಮಂದಿಯ ಜೀವ ರಕ್ಷಿಸಿದ ಅತ್ಯಮೂಲ್ಯ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರೆ ಪ್ರಶಸ್ತಿಗೂ ಘನತೆ ಹೆಚ್ಚಲಿದೆ ಎಂದು ಶಾಸಕ ಯಶಪಾಲ್ ತಿಳಿಸಿದ್ದಾರೆ.