
ಪ್ರಯತ್ನಿಸುವ ಛಲ ವಿದ್ಯಾರ್ಥಿಗಳಲ್ಲಿರಬೇಕು: ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ.
ಅಜ್ಜರಕಡು: ಪ್ರಯತ್ನಿಸುವ ಛಲ ವಿದ್ಯಾರ್ಥಿಗಳಲ್ಲಿರಬೇಕು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಅನುಭವ ಹೆಚ್ಚುವುದರ ಜೊತೆಗೆ ಪರೀಕ್ಷಾ ವಿಧಾನ, ಪ್ರಶ್ನಪತ್ರಿಕೆಯ ಮಾದರಿ, ಸಮಯ ಪ್ರಜ್ಞೆ ಮತ್ತು ಸಮರ್ಪಕ ಉತ್ತರಗಳ ಆಯ್ಕೆ ಸುಲಭವಾಗಿ, ಪರೀಕ್ಷೆಯ ಭಯ ಕಡಿಮೆಯಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ. ಹೇಳಿದರು.
ಇವರು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ಪಿ.ಜಿ, ಎ.ವಿ ಸಭಾಂಗಣದಲ್ಲಿ ಆಯೋಜಿಸಲಾದ ‘ಕಲಶ’ ಕಾಲೇಜು ವಾರ್ಷಿಕ ಸಂಚಿಕೆ ಅನಾವರಣ ಹಾಗೂ ಯು.ಪಿ.ಎಸ್.ಸಿ/ಕೆ.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ದಿನ ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಸಮಾನ್ಯ ಜ್ಞಾನ, ಭಾಷಾ ಜ್ಞಾನ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ನಗರ ಸಭೆ ಪೌರಾಯುಕ್ತ ರಾಯಪ್ಪ, ಕಾಲೇಜಿನ ವಾರ್ಷಿಕ ಸಂಚಿಕೆ ‘ಕಲಶ’ವನ್ನು ಅನಾವರಣಗೊಳಿಸಿ ಮಾತನಾಡಿ, ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಮತ್ತು ವಿಲೇವಾರಿ ನಮ್ಮ ವ್ಯವಸ್ಥೆಯ ಬಹುದೊಡ್ಡ ಸಮಸ್ಯೆಯಾಗಿದೆ. ಸಾಕಷ್ಟು ಪ್ರಮಾಣದ ಅರಿವು, ಜಾಗೃತಿ ಮತ್ತು ತರಬೇತಿಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆಯಾದರು ಸಮರ್ಪಕ ತ್ಯಾಜ್ಯ ವಿಲೇವಾರಿ ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಕಾಲೇಜು ಕೊಠಡಿ, ಆವರಣ ಮತ್ತು ಮನೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಇದರಿಂದ ನಾವು ಆರೋಗ್ಯವಂತರಾಗಿರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ನಗರಸಭೆ ಪೌರಾಯುಕ್ತ ರಾಯಪ್ಪ ಇವರ ಸೇವೆ, ಪರಿಸರ ಕಾಳಜಿ ಮತ್ತು ಸ್ವಚ್ಛ ಉಡುಪಿಯ ಪರಿಕಲ್ಪನೆಗಾಗಿ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಎಸ್. ಶೆಟ್ಟಿ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನಾ, ಐ.ಕ್ಯೂ.ಎ.ಸಿ ಸಂಚಾಲಕರಾದ ಪ್ರೊ. ಅಡಿಗ ಮತ್ತು ಪಿ.ಜಿ ಸಂಯೋಜಕರು ಪ್ರೊ. ಕೆ. ಶ್ರೀಧರ್ ಪ್ರಸಾದ್ ಉಪಸ್ಥಿತರಿದ್ದರು.
ಕಲಶ-2023-24ರ ಸಂಪಾದಕಿ ರೇಖಾ ಎಸ್.ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರೀತಿ ತೃತೀಯ ಬಿ.ಎ ಕಾರ್ಯಕ್ರಮವನ್ನು ನಿರೂಪಿಸಿ, ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಧ್ಯಾಪಕ ಯೋಗೇಶ್ ಡಿ.ಎಚ್. ವಂದಿಸಿದರು.