
ಕಾವಡಿಯಲ್ಲಿ ಹೆಜ್ಜೇನು ದಾಳಿ: ಶಿಕ್ಷಕಿ ಗಂಭೀರ, ಜೀವ ಉಳಿಸಿದ ಆಪತ್ಬಾಂಧವ
ಕುಂದಾಪುರ: ಹೆಜ್ಜೇನು ದಾಳಿಯಿಂದ ಶಾಲೆ ಶಿಕ್ಷಕಿಯೋರ್ವರು ಗಂಭೀರ ಗಾಯ ಗೊಂಡ ಘಟನೆ ಅ.28 ರಂದು ಮಧ್ಯಾಹ್ನ ಬ್ರಹ್ಮಾವರ ತಾಲೂಕಿನ ಕಾವಡಿ ಗ್ರಾಮದಲ್ಲಿ ನಡೆದಿದೆ.
ಹೆಜ್ಜೇನು ದಾಳಿಗೊಳಗಾದ ಶಿಕ್ಷಕಿಯನ್ನು ಚುಕ್ಕಿ ಎಂದು ಗುರುತಿಸಲಾಗಿದೆ.
ಇವರು ಬ್ರಹ್ಮಾವರ ವಲಯದ ಕಾವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದು, ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಾಲೆಯಿಂದ ಮನೆಗೆ ಹೋಗಲು ನಡೆದು ಕೊಂಡು ಬರುತ್ತಿದ್ದರು. ಕಾವಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಮಾನು ಹತ್ತಿರ ಸುಮಾರು 50 ರಿಂದ 100 ಹೆಜ್ಜೇನುಗಳು ಒಮ್ಮೆಲೇ ಚುಕ್ಕಿಯವರ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿವೆ.
ಶಿಕ್ಷಕಿ ಸಹಾಯಕ್ಕಾಗಿ ಎಷ್ಟೇ ಕೂಗಿಕೊಂಡರೂ ಯಾರೂ ಹತ್ತಿರಕ್ಕೆ ಹೋಗದೆ ದೂರದಿಂದಲೇ ಗಮನಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಕಾರಿನಲ್ಲಿ ಬರುತ್ತಿದ್ದ ಪ್ರಸಾದ್ ಮೆಂಡನ್ ಎಂಬವರು ತನ್ನ ಜೀವದ ಹಂಗನ್ನು ತೊರೆದು ನೋವಿನಿಂದ ಬೊಬ್ಬೆ ಹೊಡೆಯುತ್ತಿದ್ದ ಶಿಕ್ಷಕಿಯ ಬಳಿ ಬಂದು, ಹೆಜ್ಜೇನುಗಳಿಂದ ಆಕೆಯನ್ನು ಕಾಪಾಡಿದರು. ತಕ್ಷಣ ತನ್ನ ಕಾರಿನಲ್ಲಿ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಗಂಭೀರ ಗಾಯಗೊಂಡ ಶಿಕ್ಷಕಿ ಚುಕ್ಕಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದು, ಚಿಕಿತ್ಸೆ ನಡೆದಿದೆ.