
ನ.4ರಿಂದ ದತ್ತಮಾಲಾ ಅಭಿಯಾನ
ಮಂಗಳೂರು: ಶ್ರೀರಾಮ ಸೇನಾ-ಕರ್ನಾಟಕ ವತಿಯಿಂದ ದತ್ತಪೀಠ ಸಂಪೂರ್ಣ ಮುಕ್ತಿಗಾಗಿ ನಿರಂತರ 21ನೇ ವರ್ಷದ ದತ್ತಮಾಲಾ ಅಭಿಯಾನ ಕಾರ್ಯಕ್ರಮ ನ.4ರಿಂದ ನ.10ರವರೆಗೆ ನಡೆಯಲಿದೆ ಎಂದು ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಅಡ್ಯಾರ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನ.4ರಂದು ರಾಜ್ಯಾದ್ಯಂತ ಮಾಲಾಧಾರಣೆ, ನ.೭ರಂದು ದತ್ತ ದೀಪೋತ್ಸವ, ನ.9ರಂದು ದತ್ತ ಪಡಿ ಸಂಗ್ರಹ, ನ.೧೦ರಂದು ಬೃಹತ್ ಶೋಭಾಯಾತ್ರೆ, ಧಾರ್ಮಿಕ ಸಭೆ, ದತ್ತಪೀಠದಲ್ಲಿ ಶ್ರೀ ಸತ್ಯ ದತ್ತ ವ್ರತ ಮತ್ತು ಶ್ರೀ ದತ್ತ ಹೋಮ ನಡೆಯಲಿದೆ. ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಗಾಣಗಾಪುರ ಕಂಬಳಗಿರಿ ಮಹಾರಾಜ ವಿವೇಕ ಚಿಂತಾಮಣಿ ಮಹಾರಾಜ, ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ತೆಲಂಗಾಣದ ಮಾಧವಿ ಲತಾ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಪ್ರತಾಪ್ ಸಿಂಹ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಬೇಡಿಕೆಗಳು..
ದತ್ತಪೀಠದಲ್ಲಿರುವ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾಕ್ಕೆ ಸ್ಥಳಾಂತರಿಸುವುದು, ಹಿಂದೂ ಅರ್ಚಕರನ್ನು ಮಾತ್ರ ನೇಮಿಸುವುದು, ಮಹಾಪ್ರಸಾದ ವ್ಯವಸ್ಥೆ, ವಸತಿ ವ್ಯವಸ್ಥೆ ಕಲ್ಪಿಸುವುದು, ಗಾಣಗಾಪುರದಿಂದ ಬಸ್ ದತ್ತಪೀಠಕ್ಕೆ ಬಸ್ ಸೇವೆ ಪ್ರಾರಂಭಿಸುವುದು ಉದ್ದೇಶವಾಗಿದೆ ಎಂದರು.
ರಾಜ್ಯದ ನಾನಾ ಕಡೆಯಿಂದ 10ಸಾವಿರಕ್ಕೂ ಅಧಿಕ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆಯಿದೆ. ನ.9ರಂದು ರಾತ್ರಿ 10ಗಂಟೆಗೆ ದ.ಕ. ಜಿಲ್ಲೆಯಿಂದ 1300ಮಂದಿ ಮಾಲಾಧಾರಿಗಳು ಕದ್ರಿ ಮೈದಾನದಿಂದ ಹೊರಡಲಿದ್ದೇವೆ. ಮಂಗಳೂರಿನಲ್ಲಿ ದತ್ತ ದೀಪೋತ್ಸವ ನ.೭ರಂದು ಪಿವಿಎಸ್‌ನ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆಯಲಿದೆ ಎಂದರು.
ಶ್ರೀರಾಮ ಸೇನಾ ವಿಭಾಗಾಧ್ಯಕ್ಷ ಮಧುಸೂದನ ಉರ್ವಸ್ಟೋರ್, ಜಿಲ್ಲಾಧ್ಯಕ್ಷ ಅರುಣ್ ಕದ್ರಿ, ಜಿಲ್ಲಾ ಉಪಾಧ್ಯಕ್ಷ ಹರೀಶ್ ಬೊಕ್ಕಪಟ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ ಫರಂಗಿಪೇಟೆ, ಜಿಲ್ಲಾ ವಕ್ತಾರ ಉಲ್ಲಾಸ್, ನಗರ ಉಪಾಧ್ಯಕ್ಷ ಮೋಹನ್ ಪದಂಗಡಿ ಉಪಸ್ಥಿತರಿದ್ದರು.