ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಕಟ್ಟಡಕ್ಕೆ ಶಿಲಾನ್ಯಾಸ

ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಕಟ್ಟಡಕ್ಕೆ ಶಿಲಾನ್ಯಾಸ


ಮಂಗಳೂರು: ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪಿಎಂ-ಎಬಿಎಚ್‌ಐಎಂ (ಪ್ರಧಾನಮಂತ್ರಿ-ಆಯುಷ್ಮಾನ್ ಭಾರತ್ ಹೆಲ್ತ್ ಇನ್‌ಫ್ರಾಸ್ಟ್ರಕ್ಚರ್ ಮಿಷನ್) ಯೋಜನೆಯಡಿ 23.75 ಕೋಟಿ ರೂ.ಗಳಲ್ಲಿ ನಿರ್ಮಾಣಗೊಳ್ಳಲಿರುವ 50 ಹಾಸಿಗೆಗಳ ತೀವ್ರ ನಿಗಾ ಘಟಕ ಕಟ್ಟಡ(ಕ್ರಿಟಿಕಲ್ ಕೇರ್ ಬ್ಲಾಕ್)ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.

ಇದೇ ವೇಳೆ ನಗರದ ಅತ್ತಾವರ ಐಎಂಎ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಸಾಂಕೇತಿಕವಾಗಿ ನಾಮಫಲಕ ಅ ನಾವರಣಗೊಳಿಸಿದರು. 

ಈ ಸಂದರ್ಭ ಸಭಾ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಕಳೆದ 10 ವರ್ಷಗಳಿಂದ ಈ ಎರಡು ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದಶಕಗಳಲ್ಲಿ 3,164 ಕೋಟಿ ರೂ. ವೆಚ್ಚ ಮಾಡಲಾಗಿದ್ದು, 23 ಏಮ್ಸ್‌ಗಳ ಸ್ಥಾಪನೆ, 6 ಕೋಟಿ ಮಂದಿಗೆ 1,12,500 ಕೋಟಿ ರೂ.ಗಳ ಚಿಕಿತ್ಸಾ ಮೊತ್ತವನ್ನು ಆಯುಷ್ಮಾನ್ ಯೋಜನೆಯಡಿ ವೆಚ್ಚ  ಮಾಡಲಾಗಿದೆ. ಇನ್ನು 15 ತಿಂಗಳಲ್ಲಿ ತೀವ್ರ ನಿಗಾ ಘಟಕದ ಉದ್ಘಾಟನೆಯೂ ನೆರವೇರುವಂತಾಗಬೇಕು ಎಂದರು.

ಸರ್ಕಾರದ ಯಾವುದೇ ಯೋಜನೆಯ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದು ಜನಸಾಮಾನ್ಯರೂ ಪಾಲ್ಗೊಳ್ಳುವಂತಾಗಬೇಕು. ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಸೀ ಮಿತವಾಗದೆ ಎಲ್ಲರನ್ನೂ ಒಳಗೊಳ್ಳುವಂತಾಗಬೇಕು ಎಂದು ಸಂಸದರು ಅಭಿಪ್ರಾಯಿಸಿದರು.

ವೆನ್ಲಾಕ್‌ಗೆ ಶ್ಲಾಘನೆ:

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಪ್ರಸಕ್ತ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದೆ. ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯು ಖಾಸಗಿ ಆಸ್ಪತ್ರೆಗಳಿಗಿಂತ ಅತ್ಯುತ್ತಮ ಸ್ಥಿತಿಯಲ್ಲಿದೆ. ಉತ್ತಮ ಚಿಕಿತ್ಸೆಯೂ ಇಲ್ಲಿ ಸಿಗುತ್ತಿದೆ. ಮಂಗಳೂರು ಸೇರಿದಂತೆ ಸುತ್ತಮುತ್ತಿನ ಜಿಲ್ಲೆಗಳಿಗೆ ವೆನ್ಲಾಕ್ ಆಸ್ಪತ್ರೆ ವರದಾನವಾಗಿದೆ. ರಾಜ್ಯದಲ್ಲೇ ಇದು ಮಾದರಿ ಸರ್ಕಾರಿ ಆಸ್ಪತ್ರೆಯಾಗಿ ರೂಪುಗೊಂಡಿದೆ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್ ಇನ್ನೋರ್ವ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, 70 ವರ್ಷದ ಹಿರಿಯರಿಗಾಗಿ ಆಯುಷ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ  ವಿಸ್ತರಿಸುತ್ತಿದೆ. 5 ಲಕ್ಷ ರೂ. ವರೆಗೆ ಚಿಕಿತ್ಸಾ ವೆಚ್ಚ ಭರಿಸುತ್ತಿದ್ದು, ಇದು ಹಿರಿಯರಿಗೂ ವರದಾನವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ  ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

ಒಪಿಡಿ ಬ್ಲಾಕ್ ನಿರ್ಮಾಣ ಬೇಡಿಕೆ:

ವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ನವೀನ್ ಪ್ರಾಸ್ತಾವಿಕದಲ್ಲಿ, ಕೋವಿಡ್ ಬಳಿಕ ಪಿಎಂ-ಎಬಿಎಚ್‌ಐಎಂ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೆ  ಮೂಲಸೌಕರ್ಯ, ರೋಗಗಳ ಬಗ್ಗೆ ಕಣ್ಗಾವಲು ಹಾಗೂ ಆರೋಗ್ಯ ಸಂಶೋಧನೆಗೆ ಒತ್ತು ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಇದಕ್ಕಾಗಿ 64,180 ಕೋಟಿ ರೂ. ಮೊತ್ತ ವಿನಿಯೋಗಿಸಲಾಗುತ್ತಿದೆ. ಮುಂದೆ ಆರು ಅಂತಸ್ತಿನ ಒಪಿಡಿ ಬ್ಲಾಕ್ ನಿರ್ಮಾಣದ ಬೇಡಿಕೆ ಇದೆ ಎಂದರು.

ವೇದಿಕೆಯಲ್ಲಿ ಮೇಯರ್ ಮನೋಜ್ ಕುಮಾರ್, ಉಪ ಮೇಯರ್ ಭಾನುಮತಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಆರೋಗ್ಯ ರಕ್ಷಾ  ಸಮಿತಿ ಸದಸ್ಯರಾದ ಅಬ್ದುಲ್ ಕರೀಂ, ಪದ್ಮನಾಭ ಅಮೀನ್, ಶಶಿಧರ ಬಜಾಲ್, ಅನಿಲ್ ರಸ್ಕಿನಾ, ಪ್ರಮೀಳಾ ಈಶ್ವರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ.ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಆರ್‌ಎಂಒ ಡಾ. ಸುಧಾಕರ್, ಲೇಡಿಗೋಷನ್ ಅಧೀಕ್ಷಕ ಡಾ. ದುರ್ಗಾ ಪ್ರಸಾದ್, ಆರ್‌ಎಂಒ ಡಾ. ಜಗದೀಶ್, ಕೆಎಂಸಿ ಮಂಗಳೂರು ಡೀನ್ ಡಾ. ಉನ್ನಿಕೃಷ್ಣನ್ ಮತ್ತಿತರರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article