
ಹಿಂದು ಧಾರ್ಮಿಕ ಭಾವನೆಗಳಿಗೆ ಕಾಂಗ್ರೆಸ್ ಮಾನಸಿಕತೆಯ ವ್ಯಕ್ತಿಗಳಿಂದ ಪದೇ ಪದೇ ಘಾಸಿ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ
ಮಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹಿಂದು ವಿರೋಧಿ ಶಕ್ತಿಗಳು ಪಾಕಿಸ್ತಾನ, ಬಾಂಗ್ಲಾ ದೇಶದಲ್ಲಿರುವ ರೀತಿಯಲ್ಲಿ ವಿಭೃಂಭಿಸಲು ಆರಂಭಿಸಿವೆ. ಪೈಪೋಟಿಯ ರೀತಿಯಲ್ಲಿ ಕಾಂಗ್ರೆಸ್ ಮಾನಸಿಕತೆಯ ವ್ಯಕ್ತಿಗಳು ಹಿಂದು ಶ್ರದ್ದಾ ಭಾವನೆಗಳಿಗೆ ಪದೇಪದೇ ಘಾಸಿ ಮಾಡುವ ಹೇಯ ಕೃತ್ಯ ವನ್ನು ಎಗ್ಗಿಲ್ಲದೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚೆಗೆ ಸರ್ಕಾರಿ ಅಧಿಕಾರಿ ಸಂಜೀವ ಪೂಜಾರಿ ಎಂಬ ವ್ಯಕ್ತಿ ಭಜನೆಯ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿ, ಹಿಂದುಳಿದ ಸಮಾಜದ ಮಹಿಳೆಯರನ್ನು ಅವಹೇಳನ ಮಾಡಿರುವ ಘಟನೆ ನಡೆದಿದೆ. ಮಹಿಳೆಯ ಬಗ್ಗೆ ಕೇವಲವಾಗಿ ಮಾತನಾಡಿರುವ ವ್ಯಕ್ತಿಯನ್ನು ದೂಷಿಸುವ ಬದಲು ಕಾಂಗ್ರೆಸ್ನ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವನ ಹೀನ ಮಾತಿಗೆ ಸ್ವರ ಸೇರಿಸುತ್ತಾ ಕುಣಿತ ಭಜನೆ ಬಗ್ಗೆ ಕ್ಷುಲ್ಲಕ ಮಾತನಾಡಿ, ವಿಕೃತಿ ಮೆರೆದಿದ್ದಾರೆ. ಇದು ಖಂಡನೀಯ, ಭಜನೆ ದೇವರನ್ನು ಒಲಿಸಲು ಇರುವ ಅತ್ಯಂತ ಶ್ರೇಷ್ಠ ದಾರಿ ಇದರ ಬಗ್ಗೆ ತುಚ್ಛವಾಗಿ ಮಾತನಾಡುವವರನ್ನು ಸಹಿಸಲು ಸಾಧ್ಯವಿಲ್ಲ, ಇತರ ವಿಷಯದಲ್ಲಿ ಸ್ವಯಂ ಪ್ರೇರಿತ ಕೇಸು ದಾಖಲಿಸುವ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಗಾಡ ನಿದ್ದೆಯಲ್ಲಿದೆ ಎಂದು ಬಿ.ಜೆ.ಪಿ. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುಳಾ ಅನಿಲ್ ರಾವ್ ಪ್ರಕಟಣೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭಜನೆಯಲ್ಲೂ ರಾಜಕೀಯ ಬೆರೆಸುವ ಕಾರ್ಯ ಕಾಂಗ್ರೆಸ್‌ನಿಂದ ಆಗುತ್ತಿದೆ. ಹಿಂದುತ್ವದ ಭದ್ರ ನೆಲೆಯಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಥಿಲಾವಸ್ತೆಗೆ ಮುಖ ಮಾಡಿ ನಿಂತಿರುವ ಕಾಂಗ್ರೆಸ್‌ಗೆ ಹಿಂದು ಭಾವನೆಗಳನ್ನು ಕೆಣಕುವುದೇ ಕಾಯಕವಾಗಿದೆ. ಇದಕ್ಕೆ ಜಿಲ್ಲೆಯ ಜನತೆ ತಕ್ಕ ಉತ್ತರವನ್ನು ಅದಕ್ಕೆ ನೀಡಿದರೂ ಇನ್ನೂ ಬುದ್ದಿ ಕಲಿತಿಲ್ಲ. ಸರ್ಕಾರ ಬಂದ ಬಳಿಕ ಪೊಲೀಸ್ ಇಲಾಖೆಯ ಮೂಲಕ ಬಿ.ಜೆ.ಪಿ. ಮತ್ತು ಹಿಂದು ಸಂಘಟನೆ ಯನ್ನು, ಹಿಂದು ಧಾರ್ಮಿಕತೆ ಬಗ್ಗೆ ಮಾತನಾಡುವವರನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದಾರೆ ಇದೇ ರೀತಿ ಮುಂದುವರಿದಲ್ಲಿ ಬೃಹತ್ ಮಟ್ಟದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.