
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಶ್ನಿಸುವ ಧ್ವನಿಗಳನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ: ಪ್ರೊ. ಪಿ.ಎಲ್.ಧರ್ಮ
ಮಂಗಳೂರು: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಶ್ನಿಸುವ ಧ್ವನಿಗಳನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರತಿಯೊಬ್ಬನಿಗೂ ತನ್ನ ಅಸ್ತಿತ್ವವೇ ಮುಖ್ಯವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಬದಲಾವಣೆ ತರಲು ಯುವಜನರೇ ಭರವಸೆಯ ಬೆಳಕಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ.ಎಲ್.ಧರ್ಮ ಹೇಳಿದರು.
ಭಾರತದ ಕ್ರೈಸ್ತ ತತ್ವಜ್ಞಾನಿಗಳ ಸಂಘ (ಎಸಿಪಿಐ) ಮಂಗಳೂರು ವಿಶ್ವವಿದ್ಯಾನಿಲಯದ ಚೇರ್ ಇನ್ ಕ್ರಿಶ್ಚಿಯಾನಿಟಿ (ಸಿಐಸಿ) ಸಹಯೋಗದಲ್ಲಿ ಶನಿವಾರ ಇಲ್ಲಿನ ಜೆಪ್ಪು ಸಂತ ಜೋಸೆಫ್ ಸೆಮಿನಾರ್‌ನಲ್ಲಿ ಆಯೋಜಿಸಿದ್ದ ‘ಭರವಸೆ: ಬಹು ಆಯಾಮದ ಒಂದು ತತ್ವ ಚಿಂತನೆ’ ಕುರಿತ ೪೭ನೇ ವಾರ್ಷಿಕ ಸಂಶೋಧನಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಬಹು ಸಂಸ್ಕೃತಿ, ವೈವಿಧ್ಯದ ಸಂಗಮವಾಗಿರುವ ಭಾರತದಲ್ಲಿ ಇಂದಿಗೂ ಮಹಾತ್ಮ ಗಾಂಧಿ ತತ್ವಗಳು ಪ್ರಸ್ತುತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿ ಆದ್ಯತೆಗಳು ಬದಲಾಗುತ್ತಿವೆ. ದಿನ ಕಳೆದಂತೆ ನಾವು ವ್ಯಕ್ತಿವಾದಿಗಳಾಗುತ್ತಿದ್ದೇವೆ. ಹೊಂದಾಣಿಕೆಯ ಗುಣ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಫಾ. ಪೀಟರ್ ಪಾವ್ಲ್ ಸಲ್ಡಾನಾ ಅಧ್ಯಕ್ಷತೆ ವಹಿಸಿ, ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು. ಬದುಕಿನಲ್ಲಿ ಭರವಸೆ ಕಳೆದುಕೊಳ್ಳುವ ಸನ್ನಿವೇಶ ಎದುರಾದರೆ, ನಮ್ಮನ್ನು ಪ್ರೀತಿಸುವ, ಸಲಹುವ ಹೃದಯಗಳನ್ನು ನೆನಪಿಸಿಕೊಳ್ಳಬೇಕು. ಆಗ ತನ್ನಿಂದ ತಾನೇ ಭರವಸೆ ಚಿಗುರೊಡೆಯುತ್ತದೆ ಎಂದರು.
ಮಂಗಳೂರು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪರಿಣಿತಾ ದಿಕ್ಸೂಚಿ ಭಾಷಣ ಮಾಡಿದರು. ಸಂತ ಜೋಸೆಫ್ಸ್ ಇಂಟರ್ ಡೈಕೊಸನ್ ಸೆಮಿನರಿಯ ರೆಕ್ಟರ್ ರೊನಾಲ್ಡ್ ಸೆರಾವೊ, ಎಸಿಪಿಐ ಅಧ್ಯಕ್ಷ ಜಾನ್ ಪೀಟರ್ ವಲಾಬ್ಡೋಸ್ ಮತ್ತಿತರರು ಇದ್ದರು.