ಕೊನೆಗೂ ಹದಿನಾಲ್ಕು ವರ್ಷಗಳ ಬಳಿಕ ಮಗನನ್ನು ಸೇರಿದ  ಫರ್ಜಾನಾ

ಕೊನೆಗೂ ಹದಿನಾಲ್ಕು ವರ್ಷಗಳ ಬಳಿಕ ಮಗನನ್ನು ಸೇರಿದ ಫರ್ಜಾನಾ


ಮಂಗಳೂರು: ಹದಿನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ಬೀದಿಯಲ್ಲಿ ನಿರ್ಗತಿಕಳಾಗಿ ಪತ್ತೆಯಾಗಿ ಅನಾಥಾಶ್ರಮ ಸೇರಿದ್ದ ಮಹಿಳೆ ಕಡೆಗೂ ತನ್ನ ಮಗನನ್ನು ಸೇರಿದ್ದಾರೆ. 

ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಫರ್ಜಾನಾ ಎಂಬ ಮಹಿಳೆ 2009ರಲ್ಲಿ ಮಂಗಳೂರು ನಗರದ ಹೊಯಿಗೆಬಜಾರ್ ಎಂಬಲ್ಲಿ ಮಾನಸಿಕ ಅಸ್ವಸ್ಥೆಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರಿನ ಸೇವಾ ಸಂಸ್ಥೆ ವೈಟ್ ಡೌಸ್ನ ಕೊರಿನಾ ರಸ್ಕಿನ್ ಅವರು, ಮಹಿಳೆಗೆ ಚಿಕಿತ್ಸೆ ಕೊಡಿಸಿ ಆಶ್ರಯ ನೀಡಿದ್ದರು. ಈ ವೇಳೆ ಮಹಿಳೆ ಬಳಿ ತನ್ನೂರಿನ ಮತ್ತು ಕುಟುಂಬದ ಬಗ್ಗೆ ಕೇಳಿದಾಗ ನಿಖರ ಮಾಹಿತಿ ನೀಡುತ್ತಿರಲಿಲ್ಲ.

ಕೇವಲ ಮದ್ದೂರು ಮಾಂಸದಂಗಡಿ ಬಳಿ ಮನೆ ಇರುವುದಾಗಿ ಹೇಳುತ್ತಿದ್ದರು. ರಾಜ್ಯದ ಹಲವೆಡೆ ಮದ್ದೂರು ಹೆಸರಿನ ಊರುಗಳಿದ್ದು, ಯಾವ ಮದ್ದೂರು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ವೈಟ್ ಡೌಸ್ ಸಂಸ್ಥೆ ಹಲವೆಡೆಗೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಹುಡುಕಿಸಿದ್ದರೂ ಕುಟುಂಬಸ್ಥರು ಪತ್ತೆಯಾಗಿರಲಿಲ್ಲ. 

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರಿನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಆಕೆಯ ಕುಟುಂಬಸ್ಥರು ಗುರುತಿಸಿ ಕರೆದುಕೊಂಡು ಹೋಗಲು ವೈಟ್ ಡೌಸ್ಗೆ ಬಂದಿದ್ದರು. ಈ ವೇಳೆ ಅವರಿಗೆ ಫರ್ಜಾನ ಬಗ್ಗೆ ಮದ್ದೂರಿನಲ್ಲಿರುವ ಮಾಂಸದಂಗಡಿಯವರಿಗೆ ಮಾಹಿತಿ ನೀಡುವಂತೆ ಚೀಟಿಯೊಂದನ್ನು ಕೊಟ್ಟು ಕಳುಹಿಸಲಾಗಿತ್ತು. ಈ ಚೀಟಿ ಅದೃಷ್ಟವಶಾತ್ ಫರ್ಜಾನ ಪುತ್ರ ಆಸೀಫ್ಗೆ ಸಿಕ್ಕಿದೆ. ನಂತರ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಹೋಗಲು ತಂಗಿ, ಭಾವ ಮತ್ತು ಹೆಂಡತಿ, ಮಕ್ಕಳೊಂದಿಗೆ ಮಂಗಳೂರಿನ ವೈಟ್ ಡೌಸ್‌ಗೆ ಆಗಮಿಸಿದ್ದರು.

ತನ್ನನ್ನು ಕರೆದುಕೊಂಡು ಹೋಗಲು ಬಂದ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕಂಡ ಫರ್ಜಾನ ಖುಷಿಗೆ ಪಾರವೇ ಇರಲಿಲ್ಲ. ಫರ್ಜಾನ ಮನೆ ಬಿಟ್ಟು ಬಂದಾಗ ಮಗ ಆಸೀಫ್ಗೆ ಮೂರು ವರ್ಷ ಆಗಿತ್ತು. ಇಂದು ಆಸೀಫ್ ಮದುವೆಯಾಗಿ ಮೊಮ್ಮಗನೂ ಆಗಿದ್ದು ಇವರನ್ನು ಕಂಡ ಫರ್ಜಾನಾ ಇವನೇ ತನ್ನ ಪುತ್ರ ಎಂದು ಭಾವಿಸಿ ಆನಂದಿಸಿದ್ದಾರೆ. 

"ಹಲವು ವರ್ಷಗಳಿಂದ ಹುಡುಕಾಡಿದ್ದರೂ ತಾಯಿ ಪತ್ತೆಯಾಗಿರಲಿಲ್ಲ. ಇಂದು ತುಂಬಾ ಖುಷಿಯಾಗಿದೆ. ನನಗೆ ತಾಯಿಯ ನೆನಪಿದೆ, ಆದರೆ ನನ್ನ ತಂಗಿಗೆ ತಾಯಿಯ ನೆನಪಿಲ್ಲ. ಆಕೆ ಇದೇ ಮೊದಲ ಬಾರಿಗೆ ತಾಯಿಯನ್ನು ನೋಡುತ್ತಿದ್ದಾಳೆ" ಎಂದು ಆಸೀಫ್ ಸಂತಸ ವ್ಯಕ್ತಪಡಿಸಿದ್ದಾರೆ. 

ವೈಟ್ ಡೌಸ್ ಸಂಸ್ಥೆಯ ಸ್ಥಾಪಕಿ ಕೊರಿನಾ ರಸ್ಕಿನ್ಹ ಮಾತನಾಡಿ, "2009ರ ಆಗಸ್ಟ್ನಲ್ಲಿ ಫರ್ಜಾನಾ ಸಿಕ್ಕಿದ್ದರು. ಆಗ ಅವರು ಸರಿಯಾದ ಮಾಹಿತಿ ನೀಡಿರಲಿಲ್ಲ. ನಮಗೆ ಆಕೆ ಮನೆ ಸೇರುವ ಬಗ್ಗೆ ವಿಶ್ವಾಸವೇ ಇರಲಿಲ್ಲ. ಎರಡು ವಾರದ ಹಿಂದೆ ಮದ್ದೂರಿನ ಮಹಿಳೆಯೊಬ್ಬರನ್ನು ಮನೆ ಸೇರಿಸಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಫರ್ಜಾನ ಬಗ್ಗೆ ಮಾಹಿತಿ ನೀಡಿದ್ದೆವು. ಅವರ ಸಹಾಯದಿಂದ ಇದೀಗ ಫರ್ಜಾನ ಕುಟುಂಬಸ್ಥರು ಸಿಕ್ಕಿದ್ದಾರೆ" ಎಂದು ತಿಳಿಸಿದರು.

ಫರ್ಜಾನಾ ಮದ್ದೂರಿನಲ್ಲಿ ಉದ್ಯಮಿಯೊಬ್ಬರನ್ನು ಮದುವೆಯಾಗಿ ಎರಡು ಮಕ್ಕಳಿದ್ದಾರ. ಎರಡನೇ ಮಗುವನ್ನು ಹೆತ್ತು ಬಾಣಂತಿಯಾಗಿದ್ದಾಗಲೇ ಮನೆಮಂದಿಯ ಕಿರುಕುಳ ಶುರುವಾಗಿತ್ತು. ಗಂಡನೂ ಉದ್ಯಮದಲ್ಲಿ ನಷ್ಟಗೊಂಡು ಕುಡಿತಕ್ಕೀಡಾಗಿದ್ದು ಮನೆಯವರ ಮಾತು ಕೇಳಿ ಹೆಂಡ್ತಿಗೆ ಹೊಡೆಯಲು ಶುರು ಮಾಡಿದ್ದ. ಮನೆಯ ಕುಟುಂಬ ಸದಸ್ಯರೇ ಆಸ್ತಿಗಾಗಿ ಇಷ್ಟೆಲ್ಲವನ್ನೂ ಮಾಡ್ತಿದ್ದಾರೆಂದು ಇವರಿಗೆ ತಿಳಿದಿರಲಿಲ್ಲ. ಒದೆತ ತಿಂದು ಬಾಣಂತಿ ಇದ್ದಾಗಲೇ ಫರ್ಜಾನಾ ಮನೆಯಿಂದ ಹೊರಬಿದ್ದಿದ್ದಳು. ಕೆಲವೇ ತಿಂಗಳಲ್ಲಿ ಈಕೆಯ ಗಂಡನೂ ಸಾವಿಗೀಡಾಗಿದ್ದ. ಆನಂತರ ಹೆತ್ತವರಿಲ್ಲದೆ ದಿಕ್ಕಿಲ್ಲದಂತಾಗಿದ್ದ ಇಬ್ಬರು ಮಕ್ಕಳು ಅದ್ಹೇಗೋ ಬೇರೆಯವರ ನೆರವಲ್ಲಿ ಬೆಳೆದು ಬಿಟ್ಟವು. ಆದರೆ ದೊಡ್ಡ ಮಗನಿಗೆ ತನ್ನ ಅಮ್ಮ ನಾಪತ್ತೆಯಾಗಿದ್ದಾಳೆ ಎನ್ನುವ ಅರಿವು ಇತ್ತು. ಸಾಕಷ್ಟು ಹುಡುಕಾಡಿದ್ದರೂ, ತಾಯಿ ಸಿಕ್ಕಿರಲಿಲ್ಲ. ಮಾನಸಿಕವಾಗಿ ಕುಗ್ಗಿದ್ದ ಆಕೆ ಮದ್ದೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಬಂದು ಬೀದಿಪಾಲಾಗಿದ್ದಳು. ಬೀದಿಯಲ್ಲಿ ಬಿದ್ದು ಸತ್ತು ಹೋಗುತ್ತಿದ್ದ ಮಹಿಳೆಯನ್ನು ವೈಟ್ ಡೌಸ್ ಸಂಸ್ಥೆಯವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article