
ರೈಲಿನಲ್ಲಿ ಯುವಕನ ಸುಲಿಗೆ ಮಾಡಿ ಕೊಲೆ ಮಾಡಿದ ದುರುಳರು
ಮುಲ್ಕಿ: ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಯುವಕನೋರ್ವನನ್ನು ಹಣಕ್ಕಾಗಿ ಸುಲಿಗೆ ಮಾಡಿ ಕೊಲೆ ಮಾಡಿರುವ ಬಗ್ಗೆ ಶುಕ್ರವಾರ ಮುಲ್ಕಿಯಲ್ಲಿ ರೈಲ್ವೆ ಬೋಗಿಯ ಮ್ಯಾನೇಜರ್ ಪರಿಶೀಲನೆ ನಡೆಸುವಾಗ ಕಂಡುಬಂದಿದ್ದು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಯುವಕನನ್ನು ಚಿಕ್ಕಬಳ್ಳಾಪುರದ ಕುಮಾರಪೇಟೆ ನಿವಾಸಿ ಅಮೀರ್ ಖಾನ್ ಎಂಬುವರ ಪುತ್ರ ಮೌಜಾಮ್ (35) ಎಂದು ಗುರುತಿಸಲಾಗಿದೆ.
ಮೃತ ಮೌಜಾಮ್ ಸೇಲ್ಸ್ ರೆಪ್ ಕೆಲಸ ಮಾಡುತ್ತಿದ್ದು, ಈತ ಬೆಂಗಳೂರಿನಿಂದ ಮುರುಡೇಶ್ವರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದುರುಳರು ಈತನ ಹಣ, ಬ್ಯಾಗ್ ಮತ್ತು ಮೊಬೈಲ್ ಸುಲಿಗೆ ಮಾಡುವ ಉದ್ದೇಶದಿಂದ ಯಾವುದೋ ಸಾಧನದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದು, ಉಡುಪಿಯಲ್ಲಿ ರೈಲ್ವೇ ಬೋಗಿಯಲ್ಲಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾದ ಈತನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತ ಸಂಬಂಧಿಕರಾದ ಆರಿಫ್ ಉಲ್ಲಾಖಾನ್ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಈ ನಡುವೆ ಮೃತನ ಮೊಬೈಲ್ ಲೊಕೇಶನ್ ಸಕಲೇಶಪುರದಲ್ಲಿ ಕೊನೆಯ ಸಂಪರ್ಕ ಕಂಡುಬರುತ್ತಿದ್ದು, ಸಕಲೇಶಪುರ ಆಸುಪಾಸಿನಲ್ಲಿ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮುಲ್ಕಿ ಪೊಲೀಸ್ ನಿರೀಕ್ಷಕ ವಿದ್ಯಾಧರ ಡಿ. ಬೈಕೇರಿಕರ್ ಪ್ರಕರಣದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.