
ಭಾಷಾಶುದ್ಧತೆ ವರದಿಗಾರಿಕೆಯ ಜೀವಾಳ: ರಾಕೇಶ್ ಕುಮಾರ್ ಕಮ್ಮಜೆ
Tuesday, October 29, 2024
ಪುತ್ತೂರು: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪದವಿಯೊಂದಿಗೆ ಭಾಷಾ ಶುದ್ಧಿಯನ್ನು ಬೆಳೆಸಿಕೊಳ್ಳುವುದು ಅತೀ ಅಗತ್ಯ. ಅದರಲ್ಲೂ ಓದು ಮತ್ತು ಬರೆವಣಿಗೆ ಒಬ್ಬ ಪತ್ರಕರ್ತನ ಬದುಕಿನ ಅನಿವಾರ್ಯ ಅಂಗ’ ಎಂದು ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು.
ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕನ್ನಡ ಸಂಘ, ಕನ್ನಡ ಮತ್ತು ಇಂಗ್ಲಿಷ್ ವಿಭಾಗಗಳ ಸಹಯೋಗದಲ್ಲಿ ನಡೆದ ಪತ್ರಿಕಾ ವರದಿಗಾರಿಕೆಯ ತಂತ್ರಗಳು ಮತ್ತು ಸಾಧ್ಯತೆಗಳು ಎಂಬ ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಪತ್ರಿಕೋದ್ಯಮದ ತತ್ವಗಳು, ವರದಿಗಾರರ ಕೌಶಲ್ಯಗಳು, ಪರಿಣಾಮಕಾರಿ ಬರೆವಣಿಗೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯೆಂಬುದು ಬಹಳ ಮುಖ್ಯ. ಸೃಜನಶೀಲತೆ ಇಲ್ಲದೆ ಪಡೆದುಕೊಂಡ ಓದಿಗೆ ಯಾವ ಅರ್ಥವೂ ಇರಲಾರದು ಎಂದು ಹೇಳಿದರು.
ಕಾಲೇಜಿನ ಉಪ ಪ್ರಾಂಶುಪಾಲ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯ ಕುಮಾರ ಮೊಳೆಯಾರ, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಎಸ್. ರೈ ಉಪಸ್ಥಿತರಿದ್ದರು. ವಿದ್ಯಾರ್ಥಿ ಸ್ಕಂದ ಕೃಷ್ಣ ಸ್ವಾಗತಿಸಿದರು. ಫಾರಿಸಾ ಎನ್. ವಂದಿಸಿ, ಸಬೀದ ನಿರೂಪಿಸಿದರು.