
ಕೊರಗ ಸಮುದಾಯಕ್ಕೆ ಸಂದ ಗೌರವ: ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಬಾಬು ಕೊರಗ ಹೇಳಿಕೆ
ಶಿರ್ವ: ಸಾವಿರ ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ ಅಸ್ತಿತ್ವವೇ ಇಲ್ಲದ ಒಂದು ಸಮುದಾಯ ಇದ್ದಿದ್ದರೆ ಅದು ಕೊರಗ ಸಮುದಾಯ. ಈ ಸಮುದಾಯಕ್ಕೆ ಅಸ್ತಿತ್ವದ ಕಲ್ಪನೆ ಕೊಡಿಸಿದ್ದೇ ಕಾಪು ದೇವದಾಸ್ ಶೆಟ್ಟಿಯವರು. ಕಾಪು ಪರಿಸರದ ಏನೂ ಅಲ್ಲದ,ಅಸ್ತಿತ್ವದ ಅರಿವೇ ಇಲ್ಲದ ಕೊರಗರನ್ನು ಸಂಘಟಿಸಿ, ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದು, ಕೊಗರ ಇತಿಹಾಸದಲ್ಲೇ ಪ್ರಮುಖ ಮೈಲುಗಲ್ಲು. ಅಂತಹ ಸಮುದಾಯದ ತನ್ನನ್ನು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಗುರುತಿಸಿರುವುದು ನಂಬಲು ಸಾಧ್ಯವಾಗದಿದ್ದರೂ ನಂಬಿಕೆಗೆ ಸಾಧ್ಯವಾಗಿದೆ. ಇದು ಕೊರಗ ಸಮುದಾಯಕ್ಕೆ ಸಂದ ಗೌರವ ಎಂದು ಕಾಪು ತಾಲೂಕು 6ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬಾಬು ಕೊರಗ ಹೇಳಿದರು.
ಅವರು ಶನಿವಾರ ತನ್ನ ಮೂಲ ಮನೆ ಪಾಂಗಾಳದ ಮಠದ ಕಾಡು,ಮಂಡೇಡಿಯ ಕುಡ್ಡು ಕೊರಗರವರ ನಿವಾಸದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಜಂಟಿಯಾಗಿ ಸಮ್ಮೇಳನಕ್ಕೆ ಅಧಿಕೃತವಾಗಿ ನೀಡಿದ ಅಹ್ವಾನ ಪತ್ರಿಕೆಯನ್ನು ಸ್ವೀಕರಿಸಿ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾ, ಪ್ರಾದೇಶಿಕ ಮೂಲಭಾಷೆಯನ್ನು ಉಳಿಸುವುದು ತುಂಬಾ ಕಷ್ಟದ ಕೆಲಸ. ಕೊರಗ ಸಮುದಾಯದ ಮೂಲಭಾಷೆ, ಕಲೆ, ಸಂಸ್ಕೃತಿ ಪರಂಪರೆ ಉಳಿಸುವ ಪ್ರಯತ್ನ ಮಾಡಿದವರಲ್ಲಿ ಬಾಬು ಕೊರಗ ಪ್ರಮುಖರು. ಬಸವಣ್ಣನವರು 12ನೇ ಶತಮಾನದಲ್ಲಿ ಕಂಡ ಕನಸು ಈಗ ನನಸಾಗುತ್ತಿದೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಸತ್ಯವನ್ನು ಸವಾಲಾಗಿರಿಸಿ ಸಾಧ್ಯತೆ ಇದೆ ಎಂದು ತೋರಿಸಿಕೊಟ್ಟವರು ಬಾಬಣ್ಣ. ಸಾಹಿತ್ಯಕ್ಕೂ,ಸಮಾಜಕ್ಕೂ ಇರುವ ಸಂಬಂಧ ಭಾಷೆಯ ಮೂಲಕ ಸಂಶೋಧನೆ ಮಾಡಿ ಬೆಳಕಿಲ್ಲದ ಸಮಾಜದಲ್ಲಿ ಗೂಡುದೀಪ ಆಗಿದ್ದಾರೆ ಎಂದರು.
ಕುಟುಂಬದ ಹಿರಿಯರಾದ ಕುಡ್ಡು ಕೊರಗರವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು.ವೇದಿಕೆಯಲ್ಲಿ ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಸಮಾಜದ ಪ್ರಮುಖರಾದ ಸುಂದರ ಟಿ. ಇದ್ದರು.
ಸಮಿತಿಯ ಸದಸ್ಯರಾದ ಸುಧಾಕರ ಪೂಜಾರಿ ಸ್ವಾಗತಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಆರ್. ಪಾಟ್ಕರ್ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು. ಜಿಲ್ಲಾ ಸಮಿತಿಯ ನರಸಿಂಹಮೂರ್ತಿ, ಸಮಿತಿ ಸದಸ್ಯ ಅನಂತ ಮೂಡಿತ್ತಾಯ, ಕೊರಗ ಸಮುದಾಯದ ಪ್ರಮುಖರಾದ ರಮೇಶ್ ಬಜ್ಪೆ, ಬಾಬು ಕೊರಗ ಕುಟುಂಬಸ್ಥರು, ಕಲಾ ತಂಡದ ಸದಸ್ಯರು ಉಪಸ್ಥಿತರಿದ್ದರು.