
ಅ.29 ರಂದು ಮೇಲ್ಸೇತುವೆ ವಿಳಂಬ ವಿರೋಧಿಸಿ ಪ್ರತಿಭಟನೆ
ಉಡುಪಿ: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು ಅ.29ರಂದು ಬೆಳಗ್ಗೆ 10 ಗಂಟೆಗೆ ಇಂದ್ರಾಳಿ ಸೇತುವೆ ಬಳಿ ಸಾರ್ವಜನಿಕ ಪ್ರತಿಭಟನಾ ಸಭೆ ಹಮ್ಮಿಕೊಂಡಿವೆ ಎಂದು ಸಮಿತಿ ಪ್ರಮುಖ ಅಮೃತ್ ಶೆಣೈ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೇತುವೆ ಕಾಮಗಾರಿ ಬಹುತೇಕ ಸ್ಥಗಿತಗೊಂಡು ಹಲವು ವರ್ಷಗಳು ಸಂದಿವೆ. ಅದರಿಂದ ಅಲ್ಲಿ ಅಪಘಾತಗಳಾಗಿ ಅಪಾರ ಸಾವು ನೋವು ಸಂಭವಿಸುತ್ತಿದೆ. ಅಲ್ಲದೆ ದಿನಗಟ್ಟಲೆ ಟ್ರಾಫಿಕ್ ಜಾಮ್‌ಗೂ ಕಾರಣವಾಗುತ್ತಿದೆ. ಅಲ್ಲಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳ ಜೀವಕ್ಕೂ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ. ಪಾದಚಾರಿಗಳಿಗೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತಾದಿಗಳಿಗೆ, ಬೇರೆ ಬೇರೆ ಜಿಲ್ಲೆಗಳಿಂದ ಮಣಿಪಾಲ ಆಸ್ಪತ್ರೆಗೆ ಬರುವ ರೋಗಿಗಳಿಗೂ ಬಹಳ ತೊಂದರೆ ಆಗುತ್ತಿದೆ. ಒಟ್ಟಾರೆ ಕಾಮಗಾರಿ ವಿಳಂಬದಿಂದ ಉಡುಪಿಯ ಆರ್ಥಿಕತೆಗೆ ಪರೋಕ್ಷವಾಗಿ ಹೊಡೆತವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ಮೂಲಕ ಜನಜಾಗೃತಿ ಮೂಡಿಸುವುದಲ್ಲದೆ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಅಂದರೆ ಜ.29ರೊಳಗೆ ಈ ಕಾಮಗಾರಿ ಮುಗಿಸಿ ಚತುಷ್ಪಥ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದಲ್ಲಿ ಜ.30ರಂದು ಉಗ್ರ ಹೋರಾಟ ನಡೆಸಲಾಗುವುದು. ಈ ಕುರಿತ ಮನವಿಯನ್ನು ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಮೂಲಕ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಜ್ಯೋತಿ ಹೆಬ್ಬಾರ್, ಅಬ್ದುಲ್ ಅಝೀಝ್ ಉದ್ಯಾವರ, ಬಿ. ಕುಶಲ ಶೆಟ್ಟಿ, ಅನ್ಸಾರ್ ಅಹ್ಮದ್, ಲತಾ ಆನಂದ ಶೇರಿಗಾರ್, ರಮೇಶ್ ಕಾಂಚನ್, ಚಂದ್ರಮೋಹನ್, ಸುರೇಶ್ ಶೆಟ್ಟಿ ಬನ್ನಂಜೆ, ಜಾನಕಿ ಕೃಷ್ಣ ನಾಯ್ಕ, ರಮೇಶ್ ತಿಂಗಳಾಯ, ಗಣೇಶ್ ನೆರ್ಗಿ, ಮಹಾಬಲ ಕುಂದರ್, ಬಿ. ಶ್ರೀಧರ್, ಕೀರ್ತಿ ಶೆಟ್ಟಿ ಅಂಬಲಪಾಡಿ, ಪೀರು ಮುಹಮ್ಮದ್, ಜಯನ್ ಮಲ್ಪೆ ಮೊದಲಾದವರಿದ್ದರು.