
ಕಲ್ಲಿದ್ದಲು ಆಧಾರಿತ ಫಿಶ್ ಮಿಲ್ ಮುಚ್ಚದಿದ್ದಲ್ಲಿ ಉಗ್ರ ಹೋರಾಟ: ಡಿವೈಎಫ್‌ಐ ಎಚ್ಚರಿಕೆ
ಉಳ್ಳಾಲ: ನಗರ ಸಭೆ ವ್ಯಾಪ್ತಿಯ ಕೋಟೆ ಪುರದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಫಿಶ್ ಮಿಲ್ ಕಂಪೆನಿಗಳು ಕಲ್ಲಿದ್ದಲು ಬಳಸಿ ಕೊಳ್ಳುತ್ತಿದ್ದು ಇದರಿಂದ ಪರಿಸರದ ಜನರ ಆರೋಗ್ಯ ದಲ್ಲಿ ಪರಿಣಾಮ ಬೀರುತ್ತಿದೆ. ಈ ಕಾರ್ಖಾನೆ ಮುಚ್ಚದಿದ್ದರೆ ಡಿವೈಎಫ್‌ಐ ಉಗ್ರ ಹೋರಾಟ ನಡೆಸಲಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಎಚ್ಚರಿಸಿದ್ದಾರೆ.
ಅವರು ತೊಕ್ಕೊಟ್ಟು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಅನಧಿಕೃತ ಫಿಶ್ ಮಿಲ್ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಆರ್ ಝಡ್ ಕಾನೂನು ಗಳನ್ನು ಗಾಳಿಗೆ ತೂರಿ ಅಕ್ರಮ ಕಟ್ಟಡ ನಿರ್ಮಿಸಲಾಗಿದೆ.ಬಂದರು ಇಲಾಖೆಯ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿದರು.
ಕಲ್ಲಿದ್ದಲು ಬಳಕೆಯಿಂದ ದೀರ್ಘ ಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಮತ್ತು ರಕ್ತದೊತ್ತಡ, ಹೃದ್ರೋಗ, ತುರಿಕೆ, ಅಲರ್ಜಿ ಮುಂತಾದ ಕಾಯಿಲೆಗಳು ಬರುವ ಸಾಧ್ಯತೆ ದಟ್ಟವಾಗಿದೆ. ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ವರದಿ ತಿಳಿಸಿದೆ ಎಂದು ಹೇಳಿದರು.
ಸಿಆರ್ ಝಡ್ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಕಟ್ಟಿರುವ ಕಟ್ಟಡಕ್ಕೆ ಬಾಯ್ಲರ್ ಅಳವಡಿಸಲು ಸರ್ಕಾರದ ಅಧೀನದ ಕಾರ್ಖಾನೆಗಳು, ಬಾಯ್ಲರುಗಳ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯವರು ಅನುಮತಿ ನೀಡಿರುವುದು ಸರಿಯಲ್ಲ.ಜನವಸತಿ ಪ್ರದೇಶದಲ್ಲಿ ತೊಂದರೆ ಆಗಬಹುದಾದ ಸಂಭವನೀಯ ಅಪಘಾತಗಳನ್ನು ಗಮನದಲ್ಲಿಟ್ಟುಕೊಳ್ಳದೇ ಬಾಯ್ಲರು ಅಳವಡಿಕೆಗೆ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅಲ್ಲದೇ ಮೀನಿನ ಕಾರ್ಖಾನೆ ವಿಸ್ತರಣೆ ಮಾಡುವ ನಿಮಿತ್ತ ಕಾರ್ಖಾನೆಯಿಂದ ಸಾರ್ವಜನಿಕರಿಂದ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಮೀನಿನ ಕಾರ್ಖಾನೆ ಮುಚ್ಚಲು 2007ರಲ್ಲೇ ಬಂದರು ಅಧಿಕಾರಿ ಆದೇಶ ನೀಡಲಾಗಿದ್ದರೂ ಇದುವರೆಗೆ ಆದೇಶ ಪಾಲನೆ ಆಗುತ್ತಿಲ್ಲ. ಅಲ್ಲದೇ ಇಲ್ಲಿನ ಮಲಿನ ನೀರನ್ನು ನದಿಗೆ ಬಿಡಲಾಗುತ್ತದೆ. ಇದರಿಂದ ಬಹಳಷ್ಟು ಮೀನುಗಳು ಸಾವನ್ನಪ್ಪುತ್ತವೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಕೂಡ ಆಗಿದೆ. ಅಧಿಕಾರಿಗಳು ಬಂದಾಗ ಮಲಿನ ನೀರು ಬಿಡುವುದು ನಿಲ್ಲಿಸುತ್ತಾರೆ ಎಂದು ದೂರಿದರು.
ಈ ಕಾರ್ಖಾನೆ ಮುಚ್ಚಲು ಸಂಬಂಧ ಇಲಾಖೆ ವಿಫಲಗೊಂಡರೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ, ಕೋಶಾಧಿಕಾರಿ ಮೊಹಮ್ಮದ್ ಅಶ್ರಫ್, ಕೋಟೆಪುರ ಘಟಕ ಅಧ್ಯಕ್ಷ ಮೊಹಮ್ಮದ್ ಮುಸಾಫಿರ್ ವಾಕರ್, ಕಾರ್ಯದರ್ಶಿ ನೌಫಲ್, ಉಳ್ಳಾಲ ತಾಲೂಕು ಉಪಾಧ್ಯಕ್ಷ ರಝಾಕ್ ಮುಡಿಪು, ಮುಖಂಡ ಅಶ್ಫಾಕ್ ಕೋಟೆಪುರ ಉಪಸ್ಥಿತರಿದ್ದರು.